

ಬೆಂಗಳೂರು: ಶ್ರೀಗಂಧದ ಉತ್ಪನ್ನಗಳನ್ನು ಕಾನೂನುಬಾಹಿರವಾಗಿ ಮಾರಾಟ ಮಾಡುತ್ತಿದ್ದ ಉದ್ಯಮಿ ಮೇಲೆ ಕೆ.ಆರ್. ಪುರ ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಜಸ್ಥಾನ ಮೂಲದ ಇಬ್ಬರು ಉದ್ಯಮಿಗಳು ನಿಯಮ ಉಲ್ಲಂಘನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಇವರ ವಿರುದ್ಧ ಎ್ಐಆರ್ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಈ ಮೇರೆಗೆ ಕೆ.ಜಿ. ರಸ್ತೆಯ ಮನೆ ಹಾಗೂ ಸರ್ಕಾರಿ ಅಂಗ ಸಂಸ್ಥೆ ಕಾವೇರಿ ಎಂಪೋರಿಯಂ ಮೇಲೆ ಅರಣ್ಯಾಧಿಕಾರಿ ವಿ. ರಘು ನೇತೃತ್ವದ ತಂಡ ದಾಳಿ ನಡೆಸಿದೆ. ಈ ವೇಳೆ ಅಕ್ರಮವಾಗಿ ದಾಸ್ತಾನು ಮಾಡಿದ್ದ ಲಕ್ಷಾಂತರ ರೂ. ಬೆಲೆ ಬಾಳುವ ಶ್ರೀಗಂಧದ ಪೌಡರ್, ಎಣ್ಣೆ ಮತ್ತಿತರ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನೋಂದಾಯಿತ ಕರಕುಶಲ ಸಂಸ್ಥೆಗಳಿಂದ ಶ್ರೀಗಂಧದ ಉತ್ಪನ್ನಗಳನ್ನು ಖರೀದಿ ಮಾಡಿ ಮಾರಾಟ ಮಾಡಬೇಕು. ಮತ್ತೆ ಪೂರೈಕೆದಾರರು ಸಹ ಸರ್ಕಾರದಿಂದ ಅನುಮತಿ ಕಡ್ಡಾಯವಾಗಿದೆ. ರಾಜಸ್ಥಾನ ಮೂಲದ ಆರೋಪಿಗಳು, ಜೂನ್ ಮತ್ತು ಜುಲೈವರೆಗೆ ಶ್ರೀಗಂಧ ಪೂರೈಕೆ ಮಾಡಲು ಮಾತ್ರ ಪರವಾನಗಿ ಪಡೆದಿದ್ದರು. ನಂತರ ನವೀಕರಣ ಮಾಡಿರಲಿಲ್ಲ. ಆದರೂ ಅಕ್ರಮವಾಗಿ ಶ್ರೀಗಂಧದ ಉತ್ಪನ್ನಗಳನ್ನು ಖರೀದಿಸಿ ಎಂ.ಜಿ. ರಸ್ತೆಯ ಕಾವೇರಿ ಎಂಪೋರಿಯಂಗೆ ಪೂರೈಕೆ ಮಾಡಿದ್ದರು. ಅಲ್ಲದೆ, ಖಾಸಗಿ ವ್ಯಕ್ತಿಗಳಿಗೂ ಮಾರಾಟ ಮಾಡುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮನೆ, ಕಚೇರಿ ಮತ್ತು ಕಾವೇರಿ ಎಂಪೋರಿಯಂ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ. ಕೋರ್ಟ್ ಅನುಮತಿ ಪಡೆದು ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.