'ಹೈಕಮ್ಯಾಂಡ್'​ ವಿರುದ್ಧ ದನಿ ಎತ್ತಿದ ಕಾಂಗ್ರೆಸ್​ ನಾಯಕನ ಮನೆ ಮೇಲೆ ದಾಳಿ!

cong
Published on

ನವದೆಹಲಿ: ಕಾಂಗ್ರೆಸ್​​ ಪಕ್ಷದ ಚುಕ್ಕಾಣಿ ಹಿಡಿದಿರುವ ಗಾಂಧಿ ಕುಟುಂಬದೆಡೆಗೆ ಬೆಟ್ಟು ಮಾಡಿ, ಪಂಜಾಬ್​ ಪರಿಸ್ಥಿತಿ ಸೇರಿದಂತೆ ಪಕ್ಷದ ಇತ್ತೀಚಿನ ನಿರ್ಧಾರಗಳ ಬಗ್ಗೆ ಹಿರಿಯ ಕಾಂಗ್ರೆಸ್​ ನಾಯಕ ಕಪಿಲ್​ ಸಿಬಾಲ್​ ಅವರು ನಿನ್ನೆ ಸಾರ್ವಜನಿಕವಾಗಿ ಪ್ರಶ್ನೆ ಎತ್ತಿದ್ದರು. ಚುನಾಯಿತ ಅಧ್ಯಕ್ಷರೇ ಇಲ್ಲದೆ ಪಕ್ಷ ನಡೆಯುತ್ತಿದೆ ಎಂದು ಟೀಕಿಸಿದ್ದರು. ಸಿಬಾಲ್​ರ ಈ ಮಾತುಗಳು ಮಾಧ್ಯಮದಲ್ಲಿ ಪ್ರಸಾರವಾದ ಬೆನ್ನಲ್ಲೇ ಕೆಲವು ಯುವ ಕಾಂಗ್ರೆಸ್​ ಕಾರ್ಯಕರ್ತರು ಅವರ ಮನೆಯ ಮೇಲೆ ದಾಳಿ ನಡೆಸಿರುವ ಪ್ರಸಂಗ ನಡೆದಿದೆ.

ಪಕ್ಷಕ್ಕೆ ಪೂರ್ಣಕಾಲೀನ ಅಧ್ಯಕ್ಷರ ಅಗತ್ಯ ಸೇರಿದಂತೆ ಹಲವು ಸಂಘಟನಾತ್ಮಕ ಸುಧಾರಣೆಗಳಾಗಬೇಕು ಎಂದು ಆಗ್ರಹಿಸುತ್ತಿರುವ ಹಿರಿಯ ನಾಯಕರ ಗುಂಪಾದ ಜಿ-23 ಸದಸ್ಯರಲ್ಲೊಬ್ಬರಾದ ಸಿಬಾಲ್​, "ನಾವು ಜೀ ಹುಜೂರ್​ 23 ಅಲ್ಲ" ಎಂದು ವ್ಯಂಗ್ಯವಾಡಿದ್ದರು. ಪಂಜಾಬ್​ ಪರಿಸ್ಥಿತಿ ಮತ್ತು ಹಲವು ನಾಯಕರು ಪಕ್ಷ ಬಿಟ್ಟು ಹೋಗುತ್ತಿರುವ ಬಗ್ಗೆ ತಕ್ಷಣ ಕಾಂಗ್ರೆಸ್​ ಕಾರ್ಯಕಾರಿ ಸಭೆ ನಡೆಸಿ ಚರ್ಚಿಸಬೇಕು ಎಂದು ಆಗ್ರಹಿಸಿದ್ದರು.

ಇದಾದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗುಂಪೊಂದು "ಗೆಟ್​ ವೆಲ್​ ಸೂನ್​, ಕಪಿಲ್ ಸಿಬಾಲ್" ಎಂಬ ಫಲಕಗಳನ್ನು ಹಿಡಿದು, ಅವರ ಮನೆಯ ಮುಂದೆ ಪ್ರತಿಭಟನೆ ನಡೆಸಿದೆ. ನೆರೆದಿದ್ದ ಹಲವು ಯುವ ಕಾಂಗ್ರೆಸ್‌ ಕಾರ್ಯಕರ್ತರು, "ಪಕ್ಷವನ್ನು ತೊರೆಯಿರಿ! ಪ್ರಜ್ಞೆಗೆ ಬನ್ನಿ" ಎಂದೂ, "ರಾಹುಲ್ ಗಾಂಧಿ ಜಿಂದಾಬಾದ್" ಎಂದೂ ಘೋಷಣೆಗಳನ್ನು ಕೂಗಿದ್ದರು. ಕೆಲವರು ಸಿಬಾಲ್​ ಮನೆಯ ಮೇಲೆ ಟೊಮೆಟೊಗಳನ್ನು ಎಸೆದು, ಅವರ ಕಾರನ್ನು ಹಾನಿಗೊಳಿಸಿದ್ದರು ಎನ್ನಲಾಗಿದೆ.

ಈ ಬಗ್ಗೆ ಇಂದು ಮತ್ತೊಬ್ಬ ಜಿ-23 ನಾಯಕ ಆನಂದ್​ ಶರ್ಮ ಪ್ರತಿಕ್ರಿಯಿಸಿದ್ದಾರೆ. ಕಪಿಲ್​ ಸಿಬಾಲ್​ ಮನೆಯ ಮೇಲಿನ ದಾಳಿ ಮತ್ತು ಗೂಂಡಾಗಿರಿಯ ಬಗ್ಗೆ ಕೇಳಿ ಆಘಾತ ಮತ್ತು ಬೇಸರ ಉಂಟಾಗಿದೆ. ಈ ನಡವಳಿಕೆ ಪಕ್ಷಕ್ಕೆ ಕೆಟ್ಟ ಹೆಸರು ತರುವಂಥದ್ದು ಎಂದು ಟ್ವೀಟ್ ಮಾಡಿದ್ದಾರೆ. ಜೊತೆಗೆ, "ಕಾಂಗ್ರೆಸ್​ಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ಇತಿಹಾಸವಿದೆ. ಅಭಿಪ್ರಾಯಭೇದವು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ. ಅಸಹನೆ ಮತ್ತು ಹಿಂಸೆ ಕಾಂಗ್ರೆಸ್​ ಮೌಲ್ಯಗಳಿಗೆ, ಸಂಸ್ಕೃತಿಗೆ ವಿರುದ್ದವಾಗಿದೆ. ಇದಕ್ಕೆ ಕಾರಣರಾದವರನ್ನು ಗುರುತಿಸಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು" ಎಂದು ಶರ್ಮ ಮತ್ತೊಂದು ಟ್ವೀಟ್​ನಲ್ಲಿ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net