

ನವದೆಹಲಿ: ಪಂಜಾಬ್ ಕಾಂಗ್ರೆಸ್ನಲ್ಲಿ ಮುಗಿಯದ ಬಿಕ್ಕಟ್ಟಿನ ಬೆನ್ನಲ್ಲೇ ಕೇರಳದಲ್ಲಿ ನಾಯಕತ್ವದ ಹೊಸ ಸವಾಲುಗಳನ್ನು ಎದುರಿಸಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೌಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಚುನಾಯಿತ ಅಧ್ಯಕ್ಷರಿಲ್ಲದೆ ಪಕ್ಷ ನಡೆಸುತ್ತಿರುವ ವಿಪರ್ಯಾಸದ ಬಗ್ಗೆ ಕಾಂಗ್ರೆಸ್ ಹೈಕಮ್ಯಾಂಡ್ಗೆ ಜಿ-23 ನಾಯಕರು ಮತ್ತೆ ಪ್ರಶ್ನೆ ಹಾಕಿದ್ದಾರೆ.
ಪರೋಕ್ಷವಾಗಿ ಗಾಂಧಿ ಪರಿವಾರಕ್ಕೆ ಬೆಟ್ಟು ಮಾಡಿರುವ ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಾಲ್, ಕಾಂಗ್ರೆಸ್ ಪಕ್ಷದಿಂದ ಜನರು ನಿರ್ಗಮಿಸುತ್ತಿರುವ ಬಗ್ಗೆ ಹಾಗೂ ಪಂಜಾಬ್ನಲ್ಲಿ ಎದುರಾಗಿರುವ ಬಿಕ್ಕಟ್ಟಿನ ಬಗ್ಗೆ ತಕ್ಷಣ ಕಾಂಗ್ರೆಸ್ ವರ್ಕಿಂಗ್ ಕಮಿಟಿ(ಸಿಡಬ್ಲ್ಯೂಸಿ) ಸಭೆ ಕರೆದು ಚರ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
"ಕಾಂಗ್ರೆಸ್ನಲ್ಲಿ ಈಗ ಚುನಾಯಿತ ಅಧ್ಯಕ್ಷರಿಲ್ಲ. ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬುದು ನಮಗೆ ಗೊತ್ತಿಲ್ಲ" ಎಂದಿರುವ ಸಿಬಾಲ್, "ನಾವು ಜಿ-23. ಖಂಡಿತವಾಗಿ ಜೀ ಹುಜೂರ್ 23 ಅಲ್ಲ" ಎಂದು ಉದ್ಗರಿಸಿದ್ದಾರೆ. ಪಕ್ಷವನ್ನು ಹಲವರು ತೊರೆಯುತ್ತಿದ್ದಾರೆ. ಇದಕ್ಕೆ ನಮ್ಮ ತಪ್ಪುಗಳೇ ಕಾರಣವಾ ಅಂತ ಯೋಚಿಸಬೇಕು. ಪಕ್ಷದ ಮೂಲಚಿಂತನೆಯಿಂದ ನಾವು ದೂರವಾಗುತ್ತಿದ್ದೇವಾ ಎಂದು ಪರಾಮರ್ಶಿಸಬೇಕು ಎಂದು ಕಪಿಲ್ ಸಿಬಾಲ್ ಹೇಳಿದ್ದಾರೆ. (ಏಜೆನ್ಸೀಸ್)