ಬಸ್ ಚಾಲಕನ ಮೇಲೆ ಹಲ್ಲೆ : ಭಯಗೊಂಡು ಕಿರುಚಾಡಿದ ಮಕ್ಕಳು

school bus
ಮಾರ್ಪಾಡಿ ಗ್ರಾಮದ ಮರಿಯಾಡಿಯಲ್ಲಿ ಆರ್‌ಟಿಒ ಅಧಿಕಾರಿ ಶಾಲಾ ವಾಹನವನ್ನು ನಿಲ್ಲಿಸಿರುವುದು
Published on

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿಯ ಮಾರಗೊಂಡನಹಳ್ಳಿ ಬಳಿ ಶಾಲಾ ಮಕ್ಕಳಿದ್ದ ಖಾಸಗಿ ಬಸ್ ಚಾಲಕನನ್ನು ಎಳೆದಾಡಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಸೋಮವಾರ ಸಂಜೆ ೩.೪೫ ಕ್ಕೆ ಮಕ್ಕಳನ್ನ ಡ್ರಾಪ್ ಮಾಡಿಲು ಶಾಲೆಯಿಂದ ಹೊರಟಿದ್ದ ಶಾಲಾ ಬಸ್‌ಗೆ ಸ್ಕಾರ್ಪಿಯೊ ಕಾರಿನಿಂದ ಅಡ್ಡಗಟ್ಟಿದ ಐದಾರು ಯುವಕರಿದ್ದ ಗುಂಪು ಬಸ್ ಚಾಲಕನನ್ನು ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಚಾಲಕ ಜೇಮ್ಸ್ ಧೋನ್ ಎಂಬುವರ ಮೇಲೆ ಹಲ್ಲೆ ನಡೆಸಲಾಗಿದೆ.
ಶಾಲಾ ವಾಹನದ ಹಿಂದೆ ಸ್ಕಾರ್ಪಿಯೋ ಕಾರು ಬರುತ್ತಿತ್ತು. ಈ ವೇಳೆ ದಾರಿ ಬಿಡುವಂತೆ ಕಾರು ಚಾಲಕ ಒಂದೇ ಸಮನೆ ಹಾರ್ನ್ ಮಾಡಿದ್ದ. ಆಗ ಶಾಲಾ ವಾಹನದ ಚಾಲಕ ದಾರಿ ಬಿಡದೆ ಬಸ್ ಚಲಾಯಿಸಿದ್ದಾನೆ. ಇದಕ್ಕೆ ಕೋಪಗೊಂಡ ಕಾರು ಚಾಲಕ ಶಾಲಾ ವಾಹನವನ್ನು ಅಡ್ಡಗಟ್ಟಿ ಚಾಲಕನನ್ನ ಕೆಳಗಿಳಿಸಿ ಹಲ್ಲೆ ನಡೆಸಿದ್ದಾನೆ. ಈ ವೇಳೆ ಬಸ್ಸಿನಲ್ಲಿದ್ದ ಶಾಲಾ ಮಕ್ಕಳು ಭಯಗೊಂಡು ಕಿರುಚಾಡುತ್ತಿದ್ದರು ಲೆಕ್ಕಿಸದೇ ಬಸ್ಸಿನ ಗಾಜಿಗೆ ಕಲ್ಲು ಹೊಡೆದು ಪುಂಡಾಟ ನಡೆಸಿದ್ದಾರೆ. ಅಲ್ಲದೆ ಲೋಹದ ವಸ್ತುವನ್ನು ಬಳಸಿ ಬಸ್ ಕಿಟಕಿಯನ್ನು ಒಡೆದು ಬಲವಂತವಾಗಿ ಬಸ್ಸಿನೊಳಗೆ ನುಗ್ಗಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಸದ್ಯ ಚಾಲಕ ಜೇಮ್ಸ್ ಧೋನ್ ಅವರು ಘಟನೆ ಸಂಬಂಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಶೋಧ ನಡೆಸಿದ್ದಾರೆ. ಅದೃಷ್ಟವಶಾತ್, ಘಟನೆಯಲ್ಲಿ ಮಕ್ಕಳಿಗೆ ಯಾವುದೇ ಹಾನಿಯಾಗಿಲ್ಲ, ಆದರೆ ಹಠಾತ್ ದಾಳಿಯಿಂದ ಮಕ್ಕಳು ಹೆದರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net