ಒಸಾಮಾ ಬಿನ್ ಲಾಡೆನ್ ಭಾಷಣಗಳನ್ನು ಫಾಲೋ ಮಾಡ್ತಿದ್ದ ಆರೋಪ; ಪುಣೆಯಲ್ಲಿ ಶಂಕಿತ ಉಗ್ರನೊಬ್ಬನನ್ನು ಬಂಧಿಸಿದ ATS

ವಿಜಯವಾಣಿ - 2025-10-29T135128.594
Published on

ಪುಣೆ: ಅಲ್​ ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕ, ಒಸಾಮಾ ಬಿನ್ ಲಾಡೆನ್ ಭಾಷಣಗಳನ್ನು ಫಾಲೋ ಮಾಡ್ತಿದ್ದ ಆರೋಪದ ಮೇಲೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ(ATS) ಪುಣೆಯಲ್ಲಿ ಸಾಫ್ಟ್​​ವೇರ್ ಇಂಜಿನಿಯರ್ ಒಬ್ಬನನ್ನು ಬಂಧಿಸಿದೆ ಎಂದು ಬುಧವಾರ(ಅ. 29) ವರದಿಯಾಗಿದೆ.

ಜುಬೇರ್ ಹಂಗರ್ಗೇಕರ್ ಬಂಧಿತನಾಗಿರುವ ಶಂಕಿತ ಟೆಕ್ಕಿ. ಆತನ ಬಳಿಯಿಂದ ಎಕೆ-47 ರೈಫಲ್ ಬಳಸಿ ಬಾಂಬ್ ತಯಾರಿಸುತ್ತಿರುವ ಫೋಟೋಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಬಿನ್​ ಲಾಡೆನ್ ಮಾಡಿದ ಭಾಷಣಗಳ ಉರ್ದು ಅನುವಾದದ ವಿಡಿಯೋ ಹಾರ್ಡ್​​ಡಿಸ್ಕ್​ ಸೇರಿವೆ ಎಂದು ವರದಿಗಳು ಉಲ್ಲೇಖಿಸಿವೆ.

ಕಳೆದ ತಿಂಗಳಿನಿಂದ ಎಟಿಎಸ್ ಕಣ್ಗಾವಲಿನಲ್ಲಿದ್ದ ಹಂಗರ್‌ಗೇಕರ್​ನನ್ನು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಕೊಂಧ್ವಾ ಪ್ರದೇಶದಿಂದ ಬಂಧಿಸಲಾಗಿದೆ. ವಿಶೇಷ ಯುಎಪಿಎ ನ್ಯಾಯಾಲಯವು ಅವರನ್ನು ನವೆಂಬರ್ 4ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.

ಬಂಧಿತ ಹಂಗರ್ಗೇಕರ್ ರಾಷ್ಟ್ರವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಮತ್ತು ಮಹಾರಾಷ್ಟ್ರ ಮತ್ತು ಇತರ ನಗರಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ಯೋಜಿಸುತ್ತಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುವಲ್ಲಿ ಆತನ ಪಾತ್ರವನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳು ನಡೆಯುತ್ತಿವೆ ಎನ್ನಲಾಗಿದೆ.

ಸೋಲಾಪುರದವರಾದ ಹಂಗರ್‌ಗೇಕರ್ ಸುಶಿಕ್ಷಿತರಾಗಿದ್ದು, ಸಾಫ್ಟ್‌ವೇರ್ ಪರೀಕ್ಷೆ ಮತ್ತು ಡೇಟಾಬೇಸ್ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿದ್ದಾರೆ. ಬಂಧನಕ್ಕೆ ಮುನ್ನ ಕಲ್ಯಾಣಿ ನಗರದ ಸಾಫ್ಟ್‌ವೇರ್ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಅವರು ಉತ್ತಮ ಸಂಬಳ ಗಳಿಸುತ್ತಿದ್ದ ಎಂದು ಕಂಡು ಬಂದಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net