

ಶಿವಮೊಗ್ಗ: ತಾಲೂಕಿನ ಆಲದೇವರ ಹೊಸೂರು ಗ್ರಾಮದ ಸರ್ವೇ ನಂ.117ರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತೆಂಗಿನ ತೋಟವನ್ನು ನಾಶಪಡಿಸಿದ್ದಾರೆ. ಅತಿಕ್ರಮಣ ತೆರವಿನ ನೆಪದಲ್ಲಿ ರೈತರ ಮೇಲೆ ದೌರ್ಜನ್ಯ ನೆಡಸಲಾಗಿದೆ ಎಂದು ಆರೋಪಿಸಿ ಮಲೆನಾಡು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ರೈತರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ನಮ್ಮ ಜಮೀನು ಉಳಿಸಿಕೊಡಿ, ಇಲ್ಲವಾದರೆ ನೀವೇ ವಿಷ ಕೊಡಿ ಎಂದು ಘೋಷಣೆ ಕೂಗಿದರು. ರೈತರ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೇ ತೆಂಗಿನ ಮರಗಳನ್ನು ಜೆಸಿಬಿ ಮೂಲಕ ಕಿತ್ತು ಹಾಕಲಾಗಿದೆ. ಈ ಕೃತ್ಯ ಎಸಗಿರುವ ವನ್ಯಜೀವಿ ವಲಯದ ವಲಯ ಅರಣ್ಯಾಧಿಕಾರಿ ಗುರುರಾಜ್, ಉಪ ವಲಯ ಅರಣ್ಯಾಧಿಕಾರಿ ಚನ್ನಬಸಪ್ಪ ಅವರನ್ನು ಕೂಡಲೇ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ವೇ ನಂ.117ರಲ್ಲಿ 1967ರಲ್ಲಿ ಪಾರ್ವತಮ್ಮ ಓಂಕಾರಪ್ಪ ಅವರಿಗೆ ಎರಡು ಎಕರೆ ಜಮೀನು ಮಂಜೂರಾಗಿತ್ತು. 1976ರ ಏ.24ರಂದು ಅವರಿಗೆ ಸಾಗುವಳಿ ಚೀಟಿ ನೀಡಲಾಗಿತ್ತು. ಜಮೀನಿನ ಪೋಡಿಯಾಗಿದೆ. 2018ರಲ್ಲಿ ಚೇತನ್ ಗೌಡ ಎಂಬುವವರು ಈ ಜಮೀನನ್ನು ಖರೀದಿಸಿದ್ದರು.
ಈ ಸರ್ವೇ ನಂಬರ್‌ನಲ್ಲಿ ಜಂಟಿ ಸರ್ವೇ ನಡೆಸುವಂತೆ ಕಳೆದ ತಿಂಗಳ 26ರಂದು ತಹಸೀಲ್ದಾರ್ ಉಪಅರಣ್ಯಾಧಿಕಾರಿಗೆ ನೋಟಿಸ್ ನೀಡಿದ್ದರು. 2023ರಲ್ಲಿ ಪ್ರಧಾನ ವ್ಯವಹಾರ ನ್ಯಾಯಾಧೀಶರು ಎದುರು ಈ ಸರ್ವೇ ನಂಬರ್‌ನಲ್ಲಿ ಯಾವುದೇ ಅರಣ್ಯ ಭೂಮಿಯಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿಕೆ ನೀಡಿದ್ದರೂ ಕಳೆದೊಂದು ತಿಂಗಳಲ್ಲಿ ನಡೆದಿರುವ ಬೆಳವಣಿಗೆಗಳು ಆಘಾತಕಾರಿ ಎಂದರು.
ಆ.7ರಂದು ಅರಣ್ಯ ಅಧಿಕಾರಿಗಳು ಏಕಾಏಕಿ 15 ಜನರ ತಂಡದೊಂದಿಗೆ ಬಂದು ಜಮೀನಿನ ಸುತ್ತ ಹಾಕಿದ್ದ ತಂತಿ ಬೇಲಿಯನ್ನು ಕಿತ್ತುಕೊಂಡು ಹೋಗಿದ್ದಾರೆ. ನಂತರ 30 ತೆಂಗಿನ ಮರಗಳನ್ನು ಕಿತ್ತು ದೌರ್ಜನ್ಯ ಎಸಗಿದ್ದಾರೆ. ಅಡ್ಡಿಪಡಿಸಿದರೆ ಬಂದೂಕಿನಿಂದ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಕೂಡಲೇ ಈ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಮುಖರಾದ ರಮೇಶ್ ನಾಯ್ಕ, ಚೇತನ್ ಗೌಡ, ಸೋಗಾನೆ ಕೃಷ್ಣಪ್ಪ, ಸೀತನಾಯ್ಕ ಇತರರಿದ್ದರು.