ಚಿಕ್ಕಮಗಳೂರು: ಎಟಿಎಂ ಮತ್ತು ಬ್ಯಾಂಕ್‌ಗಳಿಗೆ ಭದ್ರತಾ ಸಿಬ್ಬಂದಿಯನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು. ಕಳ್ಳತನ ಪ್ರಕರಣಗಳು ಸಂಭವಿಸುತ್ತಿದ್ದು ಅಧಿಕಾರಿಗಳು ಎಚ್ಚೆತ್ತುಕೊಳ್ಳಲಿಲ್ಲ ಎಂದರೆ ಏನರ್ಥ ಎಂದು ಎಸ್ಪಿ ಉಮಾ ಪ್ರಶಾಂತ್ ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದರು.
ಪೊಲೀಸ್ ಇಲಾಖೆ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ವಿವಿಧ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಎಟಿಎಂಗಳಲ್ಲಿ ಭದ್ರತೆಯ ಕೊರತೆಯಿದೆ. ಸುರಕ್ಷತಾ ಕ್ರಮಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿಲ್ಲ. ಆದರೂ ಸಹ ಬ್ಯಾಂಕ್ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೆನರಾ ಬ್ಯಾಂಕ್ ಮ್ಯಾನೇಜರ್ ಪ್ರಮೋದ್ ಮಾತನಾಡಿ, ಎಟಿಎಂಗಳ ನಿರ್ವಹಣೆಯನ್ನು ಖಾಸಗಿ ಏಜೆನ್ಸಿಗೆ ವಹಿಸಲಾಗಿದೆ. ಬ್ಯಾಂಕಿನಿಂದ ಹಣಕಾಸು ವಹಿವಾಟು ಬಗ್ಗೆ ಪರಿಶೀಲಿಸಲಾಗುವುದು ಎಂದು ಸಮರ್ಥಿಸಿಕೊಳ್ಳಲು ಮುಂದಾದರು. ಇದಕ್ಕೆ ಗರಂ ಆದ ಎಸ್ಪಿ ಉಮಾ ಪ್ರಶಾಂತ್, ನಗರದಲ್ಲಿ ನಡೆದಿರುವ ಘಟನೆ ಹಿನ್ನೆಲೆಯಲ್ಲಿ ಸಭೆ ಕರೆದಿಲ್ಲ. ಅಧಿಕಾರಿಗಳು ಸಮರ್ಥಿಸಿಕೊಳ್ಳುವುದನ್ನು ಬಿಟ್ಟು, ಭದ್ರತೆಗಾಗಿ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಿ ಎಂದು ಖಡಕ್ಕಾಗಿ ಸೂಚಿಸಿದರು.
ತುಮಕೂರು, ಕೋಲಾರ, ಬೆಂಗಳೂರು ಸೇರಿ ಹಲವೆಡೆ ಎಟಿಎಂಗಳಲ್ಲಿ ಕಳ್ಳತನವಾಗಿದೆ. ಇದಕ್ಕೆ ಕಾರಣ ನೋಡಿದಾಗ ಸೂಕ್ತ ಭದ್ರತೆಯಿಲ್ಲ ಎಂಬುದು ಗೊತ್ತಾಗಿದೆ. ನಗರದಲ್ಲಿ ನಡೆದಿರುವ ಕೆನರಾ ಬ್ಯಾಂಕಿನ ಎಟಿಎಂ ಬಾಗಿಲು ತೆರದೇ ಇತ್ತು. ಕಳವು ಮಾಡುವ ಮೊದಲು ಸಿಸಿ ಕ್ಯಾಮರಾಗೆ ಹಾನಿ ಮಾಡಿದ್ದಾರೆ. ಆಗ ಅಲಾರ್ಮ್ ಹೊಡೆದುಕೊಳ್ಳಬೇಕಿತ್ತು. ಇಂತಹ ಸುರಕ್ಷತೆಗಳನ್ನು ಯಾಕೆ ನಿರ್ವಹಣೆ ಮಾಡಿಲ್ಲ ಎಂದು ಪ್ರಶ್ನಿಸಿದರು.
ರಾಜ್ಯದ ವಿವಿಧೆಡೆ ಎಟಿಎಂಗಳಲ್ಲಿ ಕಳ್ಳತನ ಆಗಿರುವ ವಿಷಯ ಬ್ಯಾಂಕ್ ಅಧಿಕಾರಿಗಳ ಗಮನಕ್ಕೆ ಬಂದಿರುತ್ತದೆ. ಅಧಿಕಾರಿಗಳು ಎಟಿಎಂಗಳಿಗೆ ಸೂಕ್ತ ಭದ್ರತೆ ಒದಗಿಸಿದ್ದರೆ ನಗರದಲ್ಲಿ ಎಟಿಎಂ ಕಳ್ಳತನ ಆಗುತ್ತಿರಲಿಲ್ಲ. ಇದರಿಂದ ಜನರಲ್ಲೂ ಭಯ ಉಂಟಾಗಿರುತ್ತದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಇನ್ನು ಮುಂದೆ ಇಂತಹ ಪ್ರಕರಣಗಳು ಸಂಭವಿಸಿದರೆ ಬ್ಯಾಂಕ್ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಎಎಸ್ಪಿ ಕೃಷ್ಣಮೂರ್ತಿ, ಡಿವೈಎಸ್ಪಿ ಪುರುಷೋತ್ತಮ್ ಇತರರಿದ್ದರು.