

ನವದೆಹಲಿ: ಹಣಕ್ಕಾಗಿ ಎಟಿಎಂನಿಂದ ಎಟಿಎಂಗೆ ಅಲೆದಾಡುವ ಜನಸಾಮಾನ್ಯರಿಗೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಶುಭ ಸುದ್ದಿ ನೀಡಿದೆ. ಎಟಿಎಂನಲ್ಲಿ 10 ಗಂಟೆಗಿಂತ ಹೆಚ್ಚು ಕಾಲ ನಗದು ಇಲ್ಲದೇ ಹೋದರೆ ಅಂಥ ಎಟಿಎಂ ನಿರ್ವಹಿಸುತ್ತಿರುವ ಬ್ಯಾಂಕಿಗೆ ಪ್ರತಿ ಎಟಿಎಂಗೆ 10,000 ರೂಪಾಯಿ ದಂಡ ವಿಧಿಸುವುದಾಗಿ ಆರ್ಬಿಐ ಘೋಷಿಸಿದೆ.
ವೈಟ್ ಲೇಬಲ್ ಎಟಿಎಂಗಳಾದರೆ ಅಂತಹ ಎಟಿಎಂಗಳಿಗೆ ಹಣ ತುಂಬುವ ಹೊಣೆಗಾರಿಕೆ ಹೊತ್ತುಕೊಂಡಿರುವ ಬ್ಯಾಂಕು ಅನ್ನು ಬಾಧ್ಯಸ್ಥನನ್ನಾಗಿ ಪರಿಗಣಿಸಲಾಗುತ್ತದೆ. ಹೊಸ ಉಪಕ್ರಮ ಅಕ್ಟೋಬರ್ 1ರಿಂದ ಜಾರಿ ಆಗಲಿದೆ.
ತಿಂಗಳುಗಟ್ಟಲೆ ಕೆಲವು ಎಟಿಎಂಗಳು ನಿಷ್ಕ್ರಿಯವಾಗಿರು ವುದು ಗಮನಕ್ಕೆ ಬಂದಿದೆ. ಸಾರ್ವಜನಿಕರಿಗೆ ಸಮರ್ಪಕವಾಗಿ ಎಟಿಎಂ ಸೇವೆ ಒದಗಿಸುವುದು ಆಯಾ ಬ್ಯಾಂಕುಗಳ ಹೊಣೆ ಎಂದು ಆರ್ಬಿಐ ಎಚ್ಚರಿಸಿದೆ. ಎಟಿಎಂ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಮಯದ ಡೇಟಾ ಮಷಿನ್ಗಳಲ್ಲಿ ಲಭ್ಯವಿದ್ದು, ಅದನ್ನು ಬ್ಯಾಂಕುಗಳು ಪರಿಶೀಲಿಸಬೇಕು. ಅದರ ಮಾಸಿಕ ವರದಿಯನ್ನು ಪ್ರತಿ ತಿಂಗಳ 5ನೇ ತಾರೀಕಿನೊಳಗೆ (ಉದಾ: ಅಕ್ಟೋಬರ್ ವರದಿಯನ್ನು ನ. 5ರ ಒಳಗೆ) ಸಂಬಂಧಪಟ್ಟ ಇಲಾಖೆಗೆ ಸಲ್ಲಿಸಬೇಕು. ಇದನ್ನು ಆಧರಿಸಿ ಯಾವ ಎಟಿಎಂನಲ್ಲಿ 10 ತಾಸಿಗಿಂತ ಹೆಚ್ಚು ಕಾಲ ಹಣವಿವು ದಿಲ್ಲವೋ ಅಂತಹದಕ್ಕೆ ಆರ್ಬಿಐ ದಂಡ ಹಾಕಲಿದೆ.