'ಈ ಸ್ಕ್ರಿಪ್ಟ್ ನನ್ನ ನೆಚ್ಚಿನ ನಟನಿಗಾಗಿ ಕಾಯುತ್ತಿದೆ'; ನಿರ್ದೇಶಕ ಅಟ್ಲೀ ಹೇಳಿದ್ಯಾರಿಗೆ?

Untitled design (68)
Published on

ಮುಂಬೈ: 'ಜವಾನ್​' ಮೂಲಕ ಬಾಲಿವುಡ್​ ಅಂಗಳಕ್ಕೆ ತಮ್ಮ ನಿರ್ದೇಶನವನ್ನು ಪರಿಚಯಿಸಿ, ಸಿನಿಪ್ರೇಕ್ಷಕರಿಂದ ವ್ಯಾಪಕ ಪ್ರಶಂಸೆ ಪಡೆದುಕೊಂಡ ನಿರ್ದೇಶಕ ಅಟ್ಲೀ ಕುಮಾರ್​ ಇದೀಗ ಹೊಸ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.

ತಮ್ಮ ನೆಚ್ಚಿನ ನಟರೊಬ್ಬರಿಗೆ ಸ್ಟ್ರಾಂಗ್​ ಕಥೆಯನ್ನು ಒಳಗೊಂಡಿರುವ ಸ್ಕ್ರಿಪ್ಟ್​ ರೆಡಿ ಮಾಡಿರುವುದಾಗಿ ಅಟ್ಲೀ ​ಹೇಳಿಕೊಂಡಿದ್ದಾರೆ. ಆ ಕಥೆ ಅವರಿಗಾಗಿಯೇ ಮಾಡಿದ್ದು, ಇದು ನನ್ನ ಕನಸಿನ ಪ್ರಾಜೆಕ್ಟ್​ ಎಂದು ತಿಳಿಸಿದ್ದಾರೆ. ಸದ್ಯ ಈ ವಿಷಯ ಅವರ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ತಮ್ಮ ಕನಸಿನ ಪ್ರಾಜಕ್ಟ್​ ಬಗ್ಗೆ ಮಾತನಾಡಿದ ಅಟ್ಲೀ, ಟಾಲಿವುಡ್​ನ ಸ್ಟಾರ್​ ಹೀರೋ ಅಜಿತ್ ಕುಮಾರ್ ಅವರೊಂದಿಗೆ ಸಿನಿಮಾವನ್ನು ಮಾಡುವ ಹಂಬಲ ವ್ಯಕ್ತಪಡಿಸಿದ್ದಾರೆ. 'ಮೆರ್ಸಲ್', 'ಬಿಗಿಲ್' ಮತ್ತು ಇತ್ತೀಚೆಗೆ ಬಿಡುಗೊಂಡ 'ಜವಾನ್‌' ಮುಖೇನ ಚಿತ್ರರಂಗಕ್ಕೆ ಸೂಪರ್​ ಹಿಟ್‌ ಚಿತ್ರಗಳನ್ನು ಕೊಟ್ಟ ನಿರ್ದೇಶಕ ಅಟ್ಲಿ, ಇದೀಗ ತಮಿಳು ನಟ ಅಜಿತ್ ಕುಮಾರ್‌ಗಾಗಿ ಈಗಾಗಲೇ ದೊಡ್ಡ ಸ್ಕ್ರಿಪ್ಟ್​ವೊಂದನ್ನು ಸಿದ್ಧಪಡಿಸಿದ್ದಾರಂತೆ.

ಈ ಕುರಿತಂತೆ ಅಟ್ಲೀ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. "ಅಜಿತ್​ ಸರ್ ನನಗೆ ತುಂಬ ಇಷ್ಟವಾದ ನಟ, ಅವರೊಂದಿಗೆ ಸಿನಿಮಾ ಮಾಡುವ ದೊಡ್ಡ ಆಸೆಯಿದೆ. ಇದಕ್ಕಾಗಿ ಅಜಿತ್‌ ಅವರ ಮ್ಯಾನೇಜರ್‌ ಆದ ಸುರೇಶ್​ ಚಂದ್ರ ಅವರನ್ನು ಸಂಪರ್ಕಿಸಿ, ಕಥೆ ಹೇಳಲು ಪ್ರಯತ್ನಿಸಿದ್ದೇನೆ. ಆದ್ರೆ, ಇದಕ್ಕೆ ಸಮಯ ಕೂಡಿಬಂದಿಲ್ಲ. ಈ ಸಿನಿಮಾ ತಯಾರಾದರೆ ಖಂಡಿತ ಚಿತ್ರಮಂದಿರಗಳಲ್ಲಿ ದೊಡ್ಡ ಮಟ್ಟದ ಸಕ್ಸಸ್​ ನೋಡಲಿದೆ" ಎಂದು ಅಟ್ಲೀ ಹೇಳಿದ್ದಾರೆ.

ಶಾರುಖ್ ಖಾನ್ ಮತ್ತು ನಯನತಾರ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡ 'ಜವಾನ್'​ ಸಿನಿಮಾ ನಿರ್ದೇಶಿಸಿದ ಅಟ್ಲೀಗೆ ಬಾಲಿವುಡ್​ನಲ್ಲಿ ಹೆಚ್ಚಿನ ಪ್ರಶಂಸೆ ಹಾಗೂ ಯಶಸ್ಸು ಲಭಿಸಿತು. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುವುದರ ಜತೆಗೆ ಬಾಕ್ಸ್​ ಆಫೀಸ್​ನಲ್ಲಿ ಬ್ಲಾಕ್​ಬಸ್ಟರ್ ಚಿತ್ರವಾಗಿ ಹೊರಹೊಮ್ಮಿತು. ಸದ್ಯ ಜವಾನ್​ ಸಕ್ಸಸ್​​ ನಂತರ ನಿರ್ದೇಶಕ ಅಟ್ಲೀಗೆ ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಹೆಚ್ಚಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net