

ಆಂಧ್ರಪ್ರದೇಶ: ರಾಷ್ಟ್ರ ಪ್ರಶಸ್ತಿ ವಿಜೇತ, ಟಾಲಿವುಡ್ನ ಸ್ಟೈಲಿಶ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು 'ಜವಾನ್' ನಿರ್ದೇಶಕ ಅಟ್ಲೀ ಕುಮಾರ್ ಕಾಂಬಿನೇಷ್ನಲ್ಲಿ ಹೊಸ ಸಿನಿಮಾವೊಂದು ಮೂಡಲಿದೆ ಎಂಬ ಸುದ್ದಿ ಕಳೆದ ಹಲವು ದಿನಗಳಿಂದ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸದ್ಯ ಈ ಸಂಗತಿ ಇದೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದ್ದು, ಟ್ವೀಟ್ ಮುಖೇನ ಅಲ್ಲು ಅರ್ಜನ್ ಸುಳಿವು ನೀಡಿದ್ದಾರೆ.
ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ತಮ್ಮ ಸಂಗೀತದ ಮೂಲಕ ಸದ್ದು ಮಾಡುವ ಅನಿರುದ್ಧ್ ರವಿಚಂದರ್, ಇತ್ತೀಚಿನ ಸ್ಟಾರ್ ನಟರ ಸಿನಿಮಾಗಳ ಹಿಟ್ ಹಾಡುಗಳಿಗೆ ಪ್ರಮುಖ ಕಾರಣರಾಗಿದ್ದಾರೆ. ತಮ್ಮ ಮುಂದಿನ ಸಿನಿಮಾಗಳಿಗೆ ಇವರ ಮ್ಯೂಸಿಕ್ ಕಂಪೋಸಿಷನ್ ಇರಬೇಕು ಎಂದು ಬಯಸುತ್ತಿರುವ ಖ್ಯಾತ ನಟ, ನಿರ್ದೇಶಕರ ಪೈಕಿ ಇದೀಗ ಅಲ್ಲು ಅರ್ಜುನ್ ಮುಂಚೂಣಿಯಲ್ಲಿದ್ದಾರೆ ಎಂದೇ ಹೇಳಬಹುದು.
'ಜವಾನ್' ಚಿತ್ರಕ್ಕೆ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ ಅಲ್ಲು ಅರ್ಜುನ್, ಸಿನಿಮಾದ ಪ್ರಮುಖ ನಟರು ಸೇರಿದಂತೆ ಅನಿರುದ್ಧ್ಗೂ ಅಭಿನಂದನೆ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅನಿರುದ್ಧ್, "ದನ್ಯವಾದ ಅಣ್ಣ" ಎಂದು ಹೇಳಿದ್ದಾರೆ. "ಸಾಧಾರಣ ಧನ್ಯವಾದ ಬೇಡ ನನಗೆ...ಅತ್ಯುತ್ತಮ ಹಾಡುಗಳು ಬೇಕು" ಎಂದು ಪರೋಕ್ಷವಾಗಿ ತಮ್ಮ ಮುಂದಿನ ಸಿನಿಮಾಗೆ ಸಾಂಗ್ ಕಂಪೋಸಿಷನ್ ಮಾಡಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗಷ್ಟೇ ನಡೆದ 'ಜವಾನ್' ಪ್ರಚಾರದ ಸಂದರ್ಶನದಲ್ಲಿ ಭಾಗಿಯಾಗಿ, ಮಾತನಾಡಿದ ನಿರ್ದೇಶಕ ಅಟ್ಲೀ, "ನಾನು ಈಗಾಗಲೇ ಕಥೆಯನ್ನು ಅಲ್ಲು ಅರ್ಜುನ್ ಅವರಿಗೆ ವಿವರಿಸಿದ್ದೇನೆ. ಶೀಘ್ರವೇ ಸಿಹಿ ಸುದ್ದಿ ನೀಡಲಿದ್ದೇನೆ" ಎಂದು ಹೇಳಿದ್ದರು. ಸದ್ಯ ಈ ಎಲ್ಲಾ ಸಂಗತಿಗಳನ್ನು ಗಮನಿಸಿದರೆ, ಅಲ್ಲು ಅರ್ಜುನ್, ಅಟ್ಲೀ ಮತ್ತು ಅನಿರುದ್ಧ್ ಕಾಂಬಿನೇಷನ್ನಲ್ಲಿ ಹೊಸ ಸಿನಿಮಾ ಶೀಘ್ರವೇ ಸೆಟ್ಟೇರಲಿದೆ ಎಂಬ ನಿರೀಕ್ಷೆಗಳು ಮೂಡಿದೆ,(ಏಜೆನ್ಸೀಸ್).