

ರಾಮನಗರ: ರಾಮದೇವರ ಬೆಟ್ಟದಿಂದ ಜಿಗಿದು ಬೆಂಗಳೂರಿನ ಕಾಲೇಜ್ವೊಂದರ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಶಾ ಆತ್ಮಹತ್ಯೆಗೆ ಯತ್ನಿಸಿದ್ದ ವಿದ್ಯಾರ್ಥಿನಿ. ಈಕೆ ಬೆಂಗಳೂರಿನ ಬೆಮೆಲ್ ಲೇಔಟ್ನ ನಿವಾಸಿಯಾಗಿದ್ದಾಳೆ. ಸಣ್ಣಪುಟ್ಟ ಗಾಯವಾಗಿರುವ ಈಕೆಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಪದವಿ ಓದುತ್ತಿರುವ ಇಶಾ ಅವರು, ಪರೀಕ್ಷೆ ಭಯದಿಂದಾಗಿ ಖಿನ್ನತೆಗೆ ಒಳಗಾಗಿದ್ದಳು. ರಾಮದೇವರ ಬೆಟ್ಟಕ್ಕೆ ಒಬ್ಬರೇ ಬಂದಿದ್ದಳು. ಬೆಟ್ಟದ ವೀಕ್ಷಣಾ ಸ್ಥಳದಿಂದ ಜಿಗಿದಿದ್ದಾಳೆ. ಅದೃಷ್ಟವಶಾತ್ ಗಿಡಮರಗಳ ಕೊಂಬೆಗಳ ಮಧ್ಯೆ ಸಿಲುಕಿಕೊಂಡಿದ್ದ ಇಶಾ ಪ್ರಜ್ಞೆ ತಪ್ಪಿದ್ದಳು.
ಬೆಟ್ಟದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಸಂಜೆ ವಿಷಯ ಗೊತ್ತಾಗಿದ್ದು, ಸ್ಥಳೀಯರ ನೆರವಿನೊಂದಿಗೆ ಇಶಾಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.