

ಹಾಸನ: ವಿದೇಶದಲ್ಲಿ ಭಾರತದ ಬಾವುಟ ಹಾರಿಸಬೇಕಿದ್ದ ಹಿರಿಯ ಕ್ರೀಡಾಪಟು ಕೋವಿಡ್-19 ನಿಂದಾಗಿ ಬೀದಿಯಲ್ಲಿ ನಿಂತು ಮಾಸ್ಕ್ ಮಾರುವಂತಾಗಿದೆ.
ನಗರದ ನಿವಾಸಿ ಅನಿಲ್‌ಕುಮಾರ್ (57) ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲಿ ಜಿಲ್ಲೆಯನ್ನು ಪ್ರತಿನಿಧಿಸುವ ಮೂಲಕ ಕೀರ್ತಿ ತಂದಿದ್ದಾರೆ. ಫೆಬ್ರವರಿ ತಿಂಗಳಲ್ಲಿ ಗುಜರಾತ್‌ನಲ್ಲಿ ನಡೆದ ರಾಷ್ಟ್ರೀಯ ಮಾಸ್ಟರ್ಸ್ ಅಥ್ಲೆಟಿಕ್ಸ್‌ನ 5 ಕಿ.ಮೀ. ನಡಿಗೆ ಹಾಗೂ 5 ಕಿ.ಮೀ. ಓಟದಲ್ಲಿ ಸ್ಥಾನ ಗಳಿಸಿ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು.
ಏಪ್ರಿಲ್‌ನಲ್ಲಿ ಜಪಾನ್‌ನಲ್ಲಿ ನಿಗದಿಯಾಗಿದ್ದ ಪಂದ್ಯಾವಳಿಯಲ್ಲಿ ಅನಿಲ್‌ಕುಮಾರ್ ಭಾರತವನ್ನು ಪ್ರತಿನಿಧಿಸಬೇಕಿತ್ತು. ಆದರೆ ಕರೊನಾ ಲಾಕ್‌ಡೌನ್ ಅವರ ಗುರಿಯನ್ನು ಮೊಟಕುಗೊಳಿಸಿರುವು ಮಾತ್ರವಲ್ಲದೆ ಜೀವನಕ್ಕೂ ಹೊಡೆತ ನೀಡಿದೆ.
ಕೈ ಕೊಟ್ಟ ಛಾಯಾಗ್ರಾಹಕ ವೃತ್ತಿ:ನಗರದಲ್ಲಿ ಸಣ್ಣ ಮನೆಯೊಂದರಲ್ಲಿ ವಾಸವಿರುವ ಅನಿಲ್‌ಕುಮಾರ್ ಅವಿವಾಹಿತರು. ಆರಂಭದಿಂದಲೂ ಕ್ರೀಡೆ, ಸಾಮಾಜಿಕ ಚಟುವಟಿಕೆಯಲ್ಲೇ ಗುರುತಿಸಿಕೊಂಡ ಅವರು ಜೀವನೋಪಾಯಕ್ಕಾಗಿ ಫೋಟೊಗ್ರಾಫರ್ ವೃತ್ತಿಯನ್ನು ನೆಚ್ಚಿಕೊಂಡಿದ್ದಾರೆ.
ದುಡಿಮೆಯಿಂದ ಬರುವ ಅಲ್ಪ ಸ್ವಲ್ಪ ಆದಾಯದಲ್ಲೇ ಕ್ರೀಡಾಕೂಟದ ಖರ್ಚು ಸರಿದೂಗಿಸಿಕೊಳ್ಳುತ್ತಿದ್ದರು. ಆದರೆ ಆರು ತಿಂಗಳಿಂದ ಯಾವುದೇ ಸಭೆ, ಸಮಾರಂಭ ಇಲ್ಲದ ಕಾರಣ ಕೆಲಸ ಕೈ ಕೊಟ್ಟಿದ್ದು, ಮೂರು ಹೊತ್ತಿನ ಊಟಕ್ಕಾಗಿ ಅನಿಲ್ ಕುಮಾರ್ ಪರದಾಡುತ್ತಿದ್ದಾರೆ. ವಿಧಿಯಿಲ್ಲದೆ ಮಾಸ್ಕ್ ಮಾರಾಟಕ್ಕೆ ನಿಂತಿರುವ ಅವರಿಗೆ ದಿನಕ್ಕೆ 50 ರೂ. ಲಾಭವಾದರೆ ಪುಣ್ಯ ಎಂಬಂತಾಗಿದೆ.
ಹಿರಿಯ ಕ್ರೀಡಾಪಟುವಿಗೆ ಯಾರಾದರೂ ದಾನಿಗಳು ಸಹಾಯ ಮಾಡುವವರಿದ್ದರೆ 9611966084 ಇಲ್ಲಿಗೆ ಸಂಪರ್ಕಿಸಬಹುದು.