

ಬೆಂಗಳೂರು: ಈವರೆಗೂ ಚಲನಚಿತ್ರಗಳಿಗೆ ಸೆನ್ಸರ್ ಮಂಡಳಿ ಕೊಡುವ U, U/A, A, ಸರ್ಟಿಫಿಕೇಟ್ಗಳು ಪ್ರೇಕ್ಷಕರ ವರ್ಗವನ್ನು ನಿಗದಿ ಮಾಡುತ್ತಿದ್ದು, ಅದೇ ರೀತಿ "ಅಥಿ ಐ ಲವ್ ಯು" ಚಿತ್ರಕ್ಕೂ ಸಹ ಸೆನ್ಸಾರ್ ಮಂಡಳಿ ಯು ಸರ್ಟಿಫಿಕೇಟ್ ನೀಡುವ ಮೂಲಕ ಮಕ್ಕಳಿಂದ ವಯೋ ವೃದ್ಧರವರೆಗೂ ಸೇರಿದಂತೆ ಎಲ್ಲಾ ವರ್ಗದ ಜನರು ಸಿನಿಮಾವನ್ನು ವೀಕ್ಷಣೆ ಮಾಡಬಹುದು ಎಂದು ಅನುಮತಿ ನೀಡಿದೆ.
ನಿರ್ದೇಶಕ ಲೋಕೇಂದ್ರ ಸೂರ್ಯ ಈ ಚಿತ್ರ ಕೇವಲ ದಂಪತಿಗಳಿಗೆ ಮಾತ್ರ ಎಂದು ಹೇಳಿದ್ದಾರೆ. ಹೌದು, ನಿರ್ದೇಶಕರ ಈ ಹೇಳಿಕೆಯಿಂದ ಎಂಥವರಿಗಾದರೂ ಗೊಂದಲ ಎನಿಸುವುದು ಸಹಜ. ಜನಸಾಮಾನ್ಯರು ಇಂದು ಥಿಯೇಟರ್ ಕಡೆ ಮುಖ ಮಾಡಿ ಚಿತ್ರಗಳನ್ನು ವೀಕ್ಷಿಸುವ ಪ್ರಮಾಣ ಕಡಿಮೆಯಾದ ಹಿನ್ನಲೆ ಗಾಂಧಿನಗರದ ನಟರು, ನಿರ್ದೇಶಕರು, ನಿರ್ಮಾಪಕರು ಪ್ರೇಕ್ಷಕರನ್ನು ಸದ್ಯ ಥಿಯೇಟರ್ನತ್ತ ಕರೆ ತರಲು ಬಹಳ ಕಸರತ್ತು ನಡೆಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಲೋಕೇಂದ್ರ ಸೂರ್ಯ, "ನನ್ನ 'ಅಥಿ ಐ ಲವ್ ಯು' ಚಿತ್ರವನ್ನು ದಂಪತಿಗಳು ಮಾತ್ರ ಕುಳಿತು ನೋಡಬೇಕಿದೆ" ಎಂದು ಹೇಳಿದ್ದಾರೆ. ಸೆನ್ಸರ್ ಮಂಡಳಿ ಕೊಟ್ಟಿರುವ ಯು ಸರ್ಟಿಫಿಕೇಟ್ ಮತ್ತು ನಿರ್ದೇಶಕರು ಕೊಟ್ಟಿರುವ ಹೇಳಿಕೆ ಒಂದಕ್ಕೊಂದು ವಿರುದ್ಧವಾಗಿದೆ.
ಈ ಬಗ್ಗೆ ನಿರ್ಮಾಪಕ ರೆಡ್ ಅಂಡ್ ವೈಟ್ ಸೆವೆನ್ ರಾಜ್, "ನಿರ್ದೇಶಕರು ಕೊಟ್ಟಿರುವ ಹೇಳಿಕೆ ಸರಿಯಾಗಿದೆ. ಅದರಿಂದ ನನಗೇನು ನಷ್ಟವಿಲ್ಲ, ನಮ್ಮ ಸಿನಿಮಾ ದಂಪತಿಗಳೇ ನೋಡಬೇಕಾದ ಚಿತ್ರವಾದ ಕಾರಣ ಅವರನ್ನೇ ಉದ್ದೇಶಿಸಿ ನಿರ್ದೇಶಕರು ಮಾತನಾಡಿದ್ದಾರೆ" ಎಂದು ಹೇಳಿದರು.
"ಈ ಸಾಂಸಾರಿಕ ವಿಚಾರಗಳು ಸಂಸಾರದ ಅನುಭವವನ್ನು ಕಂಡವರಿಗೆ ಮಾತ್ರವೇ ರುಚಿಸುತ್ತದೆ ವಿನಃ ಅದರ ಅನುಭವ ಇಲ್ಲದವರಿಗೆ ಅದು ಕ್ಷುಲ್ಲಕ ಎನಿಸಬಹುದು. ಆ ನಿಟ್ಟಿನಲ್ಲಿ ನಿರ್ದೇಶಕರು ಕೊಟ್ಟಿರುವ ಹೇಳಿಕೆಯನ್ನೇ ನಾನು ಗೌರವಿಸುತ್ತೇನೆ" ಎಂದು ಹೇಳಿದ್ದಾರೆ. ಅಲ್ಲದೆ ಈ ಮೊದಲ ಚಿತ್ರ A ಸರ್ಟಿಫಿಕೇಟ್ ಪಡೆದುಕೊಂಡ ಕಾರಣ ನನಗೆ ಬಹಳ ನಿರಾಶೆಯಾಗಿತ್ತು. ಆದ್ರೆ, ಈಗ "ಅತಿ ಐ ಲವ್ ಯು" ಯು ಸರ್ಟಿಫಿಕೇಟ್ ಪಡೆದುಕೊಂಡು ಬಿಡುಗಡೆಗೆ ಮತ್ತಷ್ಟು ಧೈರ್ಯ ತುಂಬಿದೆ ಎಂದರು ನಿರ್ಮಾಪಕ ಸವೆನ್ ರಾಜ್.