ಪೂರ್ವದ ಬಾಗಿಲಿನಲ್ಲಿ ನವಠಕ್ಕರ ವಿರುದ್ಧ ಬಿಗಿ ಬಂದೋಬಸ್ತ್

Untitled design (3)
Published on
ಜಗದಗಲ
ಅಮೆರಿಕಾ ಪ್ರಾಯೋಜಿತ ತಥಾಕಥಿತ ವಿದ್ಯಾರ್ಥಿ ಆಂದೋಲನದಲ್ಲಿ ಪ್ರಧಾನಿ ಶೇಖ್ ಹಸೀನಾರ ಉಚ್ಛಾಟನೆಯಾಗಿ, ಮಹಮದ್ ಯೂನುಸ್ ಅಧಿಕಾರ ಹಿಡಿದು ಕೂತು 13 ತಿಂಗಳುಗಳಾಗಿ ಹೋಗಿವೆ. ಈ ಅವಧಿಯಲ್ಲಿ ಆ ದೇಶದ ವಿದೇಶಿ ನೀತಿಗಳಲ್ಲಿ ಧ್ರುವಪಲ್ಲಟವಾಗಿದೆ. ಯಾವ ಪಾಕಿಸ್ತಾನದ ವಿರುದ್ಧ ಹೋರಾಡಿ ಬಾಂಗ್ಲಾದೇಶೀಯರು ತಮ್ಮ ನಾಡನ್ನು ಸ್ವತಂತ್ರವಾಗಿಸಿಕೊಂಡರೋ ಆ ಪಾಕಿಸ್ತಾನವನ್ನೇ ಮತ್ತೆ ಅಪ್ಪಿಕೊಳ್ಳುವ, ತಮ್ಮ ಸಾತಂತ್ರ್ಯ ಹೋರಾಟದಲ್ಲಿ ಪ್ರಧಾನ ಹಾಗೂ ನಿರ್ಣಾಯಕ ಪಾತ್ರ ವಹಿಸಿ ಯಶಸ್ಸು ತಂದುಕೊಟ್ಟ ಭಾರತದ ಹಿತಾಸಕ್ತಿಗಳಿಗೆ ಹಾನಿಯೆಸಗುವ ನಡೆಗಳನ್ನು ಯೂನುಸ್ ಸರ್ಕಾರ ನಿರಂತರವಾಗಿ ಸಾಗಿಸಿಕೊಂಡು ಬರುತ್ತಿದೆ. ಆ ಹಾದಿಯಲ್ಲಿ ಅದು ತನ್ನ ದೇಶದ ಇತಿಹಾಸವನ್ನೇ ನಿರಾಕರಿಸುತ್ತಿದೆ.

ಪಾಕಿಸ್ತಾನದಿಂದ ಶಸ್ತ್ರಾಸ್ತ್ರಗಳು ಮತ್ತು ಸ್ಪೋಟಕ ಸಾಮಗ್ರಿಗಳು ಬಾಂಗ್ಲಾದೇಶಕ್ಕೆ ಬರುವುದು ವರ್ಷದ ಹಿಂದೆಯೇ ಆರಂಭವಾಯಿತು. ಅದೇ ವೇಳೆಗೆ ಪಾಕಿಸ್ತಾನದ ಕುಖ್ಯಾತ ಐಎಸ್​ಐ ಇರಾನ್​ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ಸ್ ಮಾದರಿಯ ಮೂಲಭೂತವಾದಿ ಸೇನೆಯೊಂದನ್ನು ಯೂನುಸ್ ಸರ್ಕಾರಕ್ಕಾಗಿ ಬಾಂಗ್ಲಾದೇಶದಲ್ಲಿ ತರಬೇತಿಗೊಳಿಸುವ ಯೋಜನೆಯ ಸುದ್ದಿಯೂ ಬಂದಿತ್ತು. ಆದರೆ ಅದಕ್ಕೆ ಸೇನಾ ಮುಖ್ಯಸ್ಥ ಜ. ವಖಾರುಜ್ಜಮಾನ್ ಅವರ ಸಮ್ಮತಿಯಿಲ್ಲ ಎಂಬ ಮಾತೂ ಆಗ ಕೇಳಿಬಂದಿತ್ತು. ಆ ಕುರಿತಾಗಿನ ಬೆಳವಣಿಗೆಗಳ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಲಭ್ಯವಿಲ್ಲ. ಆದರೆ ಭಾರತ ಎಚ್ಚರಿಕೆಯಿಂದ ಗಮನಿಸಬೇಕಾದ ಬೆಳವಣಿಗೆಗಳು ಅಡಿಗಡಿಗೆ ಘಟಿಸುತ್ತಲೇ ಇವೆ.

ಮಾರ್ಚ್ 26 ಬಾಂಗ್ಲಾದೇಶದ ಸ್ವಾತಂತ್ರ್ಯ ದಿನ. ಸಹಜವಾಗಿಯೇ ಅದು ರಾಷ್ಟ್ರೀಯ ಉತ್ಸವ. ದೇಶವನ್ನು ಉದ್ದೇಶಿಸಿ ಪ್ರಧಾನಿ ಭಾಷಣ ಮಾಡುತ್ತಾರೆ, ಎಲ್ಲೆಡೆ ಧ್ವಜಾರೋಹಣದೊಂದಿಗೆ ಸ್ವಾತಂತ್ರೊ್ಯೕತ್ಸವ ಕಾರ್ಯಕ್ರಮಗಳು ಆಚರಣೆಗೊಳ್ಳುತ್ತವೆ. ಆದರೆ ಈ ಬಾರಿ ಮುಖ್ಯ ಸಲಹೆಗಾರ ಎಂಬ ಹೆಸರಿನಲ್ಲಿ ಪ್ರಧಾನಿ ಸ್ಥಾನಮಾನ ಮತ್ತು ಅಧಿಕಾರಗಳನ್ನು ಹೊಂದಿರುವ ಮಹಮದ್ ಯೂನುಸ್ ಬೀಜಿಂಗ್​ನಲ್ಲಿದ್ದರು! ಅಲ್ಲಿ ಭಾಷಣ ಮಾಡುತ್ತ ಬಾಂಗ್ಲಾದೇಶ ಸಮುದ್ರ ರಕ್ಷಕ, ಸಪ್ತ ಸಹೋದರಿಯರು ಎಂದು ಕರೆಯಲಾಗುವ ಭಾರತದ 7 ಪೂವೋತ್ತರ ರಾಜ್ಯಗಳಿಗೆ ಸಮುದ್ರ ಸಂಪರ್ಕವಿರುವುದೇ ಬಾಂಗ್ಲಾದೇಶದ ಮೂಲಕ, ಬಾಂಗ್ಲಾದೇಶ ಬಯಸಿದರೆ ಆ ಸಂಪರ್ಕವನ್ನು ಕತ್ತರಿಸಿಬಿಡಬಹುದು ಎಂದೆಲ್ಲ ಹೇಳಿದರು! ಅವರ ಆ ಕನಸು ಮುಂದಿನ 7 ತಿಂಗಳಲ್ಲಿ ಬೆಳೆಯುತ್ತ ಹೋಗಿ ಇದೇ ಅಕ್ಟೋಬರ್ 27ರಂದು ವಿಚಿತ್ರ ಹಾಗೂ ಅವಾಸ್ತವಿಕ ರೂಪ ಪಡೆಯಿತು. ಅಂದು ಢಾಕಾಗೆ ಭೇಟಿ ನೀಡಿದ ಪಾಕಿಸ್ತಾನಿ ಸೇನೆಯ ಉಪಮುಖ್ಯಸ್ಥ ಲೆ.ಜ. ಶಾಹಿದ್ ಶಂಶಾದ್ ಮಿರ್ಜಾ ಅವರಿಗೆ ಯೂನುಸ್ ಸರ್ಕಾರ ಸಾರ್ವಜನಿಕವಾಗಿಯೇ ಪುಸ್ತಕವೊಂದನ್ನು ನೀಡಿತು. ಅದರೊಳಗೆ ಏನಿದೆ ಎಂದು ಗೊತ್ತಾಗಿಲ್ಲ, ಆದರೆ ಮುಖಪುಟದಲ್ಲಿದ್ದ ಭೂಪಟ ಕುತೂಹಲಕಾರಿಯಾಗಿದೆ.

‘ಗ್ರೇಟರ್ ಬಾಂಗ್ಲಾದೇಶ್’ ಅಂದರೆ ವಿಶಾಲ ಬಾಂಗ್ಲಾದೇಶ ಎಂಬ ಹೆಸರಿನ ಆ ಭೂಪಟದಲ್ಲಿ ಇಡೀ ಪೂವೋತ್ತರ ಭಾರತ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಜಾರ್ಖಂಡ್ ರಾಜ್ಯಗಳನ್ನು ಬಾಂಗ್ಲಾದೇಶದ ಭಾಗಗಳಾಗಿ ತೋರಿಸಲಾಗಿದೆ!

ಬೀಜಿಂಗ್​ನಲ್ಲಿ ಯೂನುಸ್​ರ ಮಾರ್ಚ್ 26ರ ಮಾತು ಮತ್ತು ಅಕ್ಟೋಬರ್ 27ರಂದು ಪಾಕಿಸ್ತಾನಿ ಸೇನಾಧಿಕಾರಿಯ ಕೈಗೆ ಬಂದ ಪುಸ್ತಕದಲ್ಲಿನ ಭೂಪಟ ಬಾಂಗ್ಲಾದೇಶೀಯರ ಮನಸ್ಥಿತಿಯ ಒಂದು ಚಿತ್ರಣ ನೀಡುತ್ತದೆ, ಅದು ಭಾರತಕ್ಕೆ ಅಪಾಯದ ಗಂಟೆ ಎನ್ನುವುದರ ಬಗ್ಗೆ ಎರಡು ಮಾತಿಲ್ಲ. ಆದರೆ ಈ ಅಪಾಯ ಕೇವಲ ಇಂದಿನದೇ? ಇಲ್ಲ, ಇದಕ್ಕೆ ಸ್ವತಂತ್ರ ಭಾರತದಷ್ಟೇ ಇತಿಹಾಸವಿದೆ ಮತ್ತು ನಮ್ಮ ಅಂದಿನ ನಾಯಕರು ದೇಶಹಿತದ ಬಗ್ಗೆ ದೂರದೃಷ್ಟಿ ಉಳ್ಳವರಾಗಿದ್ದಿದ್ದರೆ ಈ ಅಪಾಯವನ್ನು ಸ್ವಾಂತ್ರ್ಯದ ಸಮಯದಲ್ಲೇ ನಿವಾರಿಸಿಕೊಳ್ಳಬಹುದಾಗಿತ್ತು, ಪೂರ್ವ ಪಾಕಿಸ್ತಾನೀಯರು ಅಥವಾ ಬಾಂಗ್ಲಾದೇಶೀಯರು ಆಗಾಗ ಕಾಣುತ್ತಿರುವ ಕನಸನ್ನು ಶಾಶ್ವತವಾಗಿ ಅವರ ತಲೆಯಿಂದ ತೆಗೆದುಹಾಕಿಬಿಡಬಹುದಾಗಿತ್ತು.

ಬಾಂಗ್ಲಾದೇಶ ಅಥವಾ ಹಿಂದಿನ ಪೂರ್ವ ಪಾಕಿಸ್ತಾನದಿಂದಾಗಿ ನಮ್ಮ ಪೂವೋತ್ತರ ರಾಜ್ಯಗಳು ಭೌಗೋಳಿಕವಾಗಿ ಸಿಲುಕಿಕೊಂಡ ಇಕ್ಕಟ್ಟು ಮತ್ತದನ್ನು ಸರಿಪಡಿಸಿಕೊಳ್ಳಲು ಇದ್ದ ಅವಕಾಶವನ್ನು ನಾವು ಕಳೆದುಕೊಂಡ ದುರಂತದ ಕಥೆಯನ್ನು ಮೊದಲಿಗೆ ತೆಗೆದುಕೊಳ್ಳೋಣ. 1947ರಲ್ಲಾದ ದೇಶವಿಭಜನೆಯ ಅಂಗವಾಗಿ ಬಂಗಾಲ ಎರಡು ತುಂಡಾದಾಗ ನಮ್ಮ ಪೂವೋತ್ತರ ರಾಜ್ಯಗಳೊಂದಿಗೆ ನಮ್ಮ ಭೂಸಂಪರ್ಕ ಕೇವಲ 22 ಕಿ.ಮೀ. ಮಿತಿಯ ಸಿಲಿಗುರಿ ಕಾರಿಡಾರ್​ಗಷ್ಟೇ ಸೀಮಿತಗೊಂಡಿತು. ಕಿರಿದಾದ ಕಾರಣ ಚಿಕನ್ಸ್ ನೆಕ್ ಎಂದೂ ಕರೆಸಿಕೊಳ್ಳುವ ಆ ಕಾರಿಡಾರ್​ನ ಒಂದು ಕಡೆ ನೇಪಾಳ ಮತ್ತೊಂದು ಕಡೆ ಪೂರ್ವ ಪಾಕಿಸ್ತಾನ (ಇಂದಿನ ಬಾಂಗ್ಲಾದೇಶ) ಇರುವುದನ್ನು ಭೂಪಟದಲ್ಲಿ ನೀವು ಕಾಣಬಹುದು. ಪೂವೋತ್ತರದ ಎಂಟೂ ರಾಜ್ಯಗಳಿಗೆ ನಮ್ಮೆಲ್ಲ ರಸ್ತೆ ಹಾಗೂ ರೈಲು ಸಂಪರ್ಕ ಆ ಕೋಳಿ ಕುತ್ತಿಗೆಯ ಮೂಲಕವಷ್ಟೇ ಸಾಗಬೇಕು. ಅಲ್ಲೇನಾದ್ರೂ ತೊಂದರೆ ಕಾಣಿಸಿಕೊಂಡರೆ ಇಡೀ ಸಂಪರ್ಕ ಬಂದ್! ಆ ಕಾರಿಡಾರ್ ಅಗಲಗೊಳಿಸುವ ಅವಕಾಶ 1949-50ರಲ್ಲಿ ನಮ್ಮೆದುರಿಗೆ ಬಂತು.

ನೇಪಾಳದ ವಂಶಪಾರಂಪರ್ಯ ಮಂತ್ರಿಗಳಾದ ರಾಣಾಗಳು ಅರಸ ತ್ರಿಭುವನ್​ರ ವಿರುದ್ಧ ಪಿತೂರಿಯೆಸಗಿ ಅವರು ಸಿಂಹಾಸನ ತೊರೆದು ಭಾರತಕ್ಕೆ ಓಡಿಬಂದು ಆಶ್ರಯ ಪಡೆಯಬೇಕಾಯಿತು. ಆಗ ಅವರ ಪರವಾಗಿ ಪ್ರಧಾನಿ ನೆಹರು ಭಾರತೀಯ ಸೇನೆಯನ್ನು ಕಾಠ್ಮಂಡುವಿಗೆ ಕಳಿಸಿದರು. ರಾಝಾಗಳನ್ನು ಅಡಗಿಸಿದ ಭಾರತೀಯ ಸೇನೆ ಅರಸ ತ್ರಿಭುವನ್​ರಿಗೆ ಸಿಂಹಾಸನ ಮತ್ತೆ ದಕ್ಕುವಂತೆ ಮಾಡಿತು. ಆಗ ನೇಪಾಳವನ್ನು ಭಾರತದಲ್ಲಿ ವಿಲೀನಗೊಳಿಸಿ ಕೊಳ್ಳುವಂತೆ ಅರಸ ತ್ರಿಭುವನ್ ಪ್ರಧಾನಿ ನೆಹರುಗೆ ವಿನಂತಿಸಿಕೊಂಡರು. ಹಾಗೆ ನೇಪಾಳ ಭಾರತದ ಭಾಗವಾಗಿದ್ದರೆ ಪೂವೋತ್ತರ ರಾಜ್ಯಗಳೊಂದಿಗೆ ನಮ್ಮ ಸಂಪರ್ಕ ಮಾರ್ಗ ನೂರು ಕಿಲೋಮೀಟರ್​ಗಳಿಗೂ ಹೆಚ್ಚು ವಿಸ್ತಾರವಾಗುತ್ತಿತ್ತು. ಅದು ಚಿಕನ್ಸ್ ನೆಕ್ ಆಗಿ ಉಳಿಯುತ್ತಿರಲಿಲ್ಲ.

ಆದರೆ ಅರಸ ತ್ರಿಭುವನ್​ರ ವಿನಂತಿಯನ್ನು ನೆಹರು ನಿರಾಕರಿಸಿದರು. ನೇಪಾಳ ಸ್ವತಂತ್ರವಾಗಿಯೇ ಉಳಿಯುವುದು ಭಾರತದ ಹಿತಾಸಕ್ತಿಯ ದೃಷ್ಟಿಯಿಂದ ಉತ್ತಮ ಎನ್ನುವುದು ಅವರ ವಾದವಾಗಿತ್ತು. ಅವರ ಆ ನಿಲುವು ಅದೆಷ್ಟು ಅವಾಸ್ತವಿಕ ಹಾಗೂ ಭಾರತದ ಹಿತಾಸಕ್ತಿಗಳಿಗೆ ಮಾರಕ ಎನ್ನುವುದು ನಂತರದ ವರ್ಷಗಳಲ್ಲಿ ಗೋಚರವಾಯಿತು. 1962ರಲ್ಲಿ ಅರಸ ತ್ರಿಭುವನ್​ರ ನಿಧನದೊಂದಿಗೆ ಭಾರತದ ಬಗ್ಗೆ ನೇಪಾಳದ ಸದ್ಭಾವನೆಯೂ ಅಂತ್ಯಗೊಂಡಿತು. ಅವರ ಪುತ್ರ ಹಾಗೂ ಉತ್ತರಾಧಿಕಾರಿ ಮಹೇಂದ್ರ ನೇಪಾಳವನ್ನು ಚೀನಾದ ಮಡಿಲಿಗೆ ಕೊಂಡೊಯ್ದರು. ಧಾರ್ವಿುಕವಾಗಿ, ಭಾಷಿಕವಾಗಿ, ಸಾಂಸ್ಕೃತಿಕವಾಗಿ ಭಾರತಕ್ಕೆ ಗಾಢವಾಗಿ ಹೊಂದಿಕೊಂಡ, ಈ ದೇಶದ ರಾಜ್ಯಗಳಲ್ಲೊಂದಾಗಿ ಮಿಳಿತಗೊಳ್ಳಬಹುದಾದ ನೇಪಾಳವನ್ನು ನಮ್ಮಿಂದ ಇನ್ನಷ್ಟು ದೂರಕ್ಕೆ ತಳ್ಳಿದ್ದು ಯುಪಿಎ ಸರ್ಕಾರ, ರಾಜಸತ್ತೆಯನ್ನು ಕಿತ್ತುಹಾಕಿ, ಹಿಂದೂ ರಾಷ್ಟ್ರ ಎಂಬ ಗರಿಮೆಯನ್ನು ಅಳಿಸಿ, ಯೆಚೂರಿ ಪ್ಲಾನ್ ಮೂಲಕ ಆ ಹಿಮಾಲಯದ ನಾಡನ್ನು ಗಣರಾಜ್ಯವಾಗಿಸುವ ನೆಪದಲ್ಲಿ ಅಧಿಕಾರವನ್ನು ಚೀನಿ ಕೈಗೊಂಬೆಗಳಾದ ಕಮ್ಯೂನಿಸ್ಟರು ಮತ್ತು ಮಾವೋವಾದಿಗಳ ಕೈಯಲ್ಲಿಟ್ಟು! ಇಂದು ತಪ್ಪುಗಳನ್ನು ಸರಿಪಡಿಸುವ ಅವಕಾಶ ತೆರೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಆದರೂ ಅಂತಿಮ ಚಿತ್ರಕ್ಕಾಗಿ ನಾವು ಇನ್ನಷ್ಟು ಕಾಲ ಕಾಯಬೇಕು.

ನೇಪಾಳದ ಹೊರತಾಗಿ ಇನ್ನೊಂದು ಮಾರ್ಗದ ಮೂಲಕ ನಾವು ಪೂವೋತ್ತರ ಭಾರತದೊಂದಿಗೆ ನೇರ ಸಂಪರ್ಕ ಹೊಂದಬಹುದಾಗಿತ್ತು. ಬೇಜವಾಬ್ದಾರಿ ನಡೆಯಿಂದ ಅದನ್ನೂ ಮುಚ್ಚಿಹಾಕಿದ್ದು ಜವಾಹರ್​ಲಾಲ್ ನೆಹರು. ಬಾಂಗ್ಲಾದೇಶದ ಏಕೈಕ ರೇವುಪಟ್ಟಣ ಚಿತ್ತಗಾಂಗ್ ಇರುವ ದೇಶದ ಆಗ್ನೇಯ ಭಾಗ ಚಿತ್ತಗಾಂಗ್ ಗುಡ್ಡಗಾಡು ಪ್ರದೇಶ ಅವಿಭಜಿತ ಬಂಗಾಳದ ಭಾಗವಾಗಿತ್ತು ಮತ್ತು ಅದರಲ್ಲಿನ ಶೇಕಡ 87 ಜನತೆ ಬೌದ್ಧರು ಮತ್ತು ಹಿಂದೂಗಳಾಗಿದ್ದರು. ಭಾರತ ಮತ್ತು ಪಾಕಿಸ್ತಾನಗಳ ನಡುವೆ ನೆಲದ ಹಂಚಿಕೆಯಲ್ಲಿ ಧರ್ಮಕ್ಕೆ ಪ್ರಥಮ ಪ್ರಾಶಸ್ಱ ಗಡಿಭಾಗದ ಪುಟ್ಟ ಪ್ರದೇಶಗಳು ಯಾವ ದೊಡ್ಡ ಪ್ರದೇಶದೊಂದಿಗೆ ಆರ್ಥಿಕವಾಗಿ ಬಂಧಿತವಾಗಿವೆ ಎನ್ನುವುದೂ ಆ ಪ್ರದೇಶಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಮುಖ್ಯ ಪಾತ್ರ ವಹಿಸಬೇಕೆಂಬ ಅಭಿಪ್ರಾಯ ರ್ಯಾಡ್​ಕ್ಲೊಇಫ್ ಕಮಿಷನ್​ಗಿತ್ತು. ಚಿತ್ತಗಾಂಗ್ ಗುಡ್ಡಗಾಡು ಪ್ರದೇಶ ಆರ್ಥಿಕವಾಗಿ ಕಲ್ಕತ್ತಾಗಿಂತಲೂ ಢಾಕಾಗೆ ಬಂಧಿತವಾಗಿ ಇದ್ದುದರಿಂದಾಗಿ ಆ ಬಹುಸಂಖ್ಯಾತ ಬೌದ್ಧ-ಹಿಂದೂ ನೆಲ ಪೂರ್ವ ಪಾಕಿಸ್ತಾನದ ಭಾಗವಾಗುವ ಸಾಧ್ಯತೆ ಅಧಿಕವಾಗಿತ್ತು. ಇದರಿಂದಾಗಿ ಆತಂಕಿತರಾದ ಚಿತ್ತಗಾಂಗ್​ನ ಜನಪ್ರಮುಖರು ಕಾಂಗ್ರೆಸ್ ನೇತಾರ ಹಾಗೂ ಮಧ್ಯಂತರ ಪ್ರಧಾನಿ ನೆಹರುರನ್ನು ಭೇಟಿಯಾಗಿ ತಮ್ಮ ಜಿಲ್ಲೆ ಪೂರ್ವ ಪಾಕಿಸ್ತಾನಕ್ಕೆ ಹೋಗದಂತೆ ವೈಸ್​ರಾಯ್ ಲಾರ್ಡ್ ಮೌಂಟ್​ಬ್ಯಾಟನ್​ರ ಮನವೊಲಿಸಬೇಕೆಂದು ಮನವಿ ಸಲ್ಲಿಸಿತು. ಹಾಗೆ ಮಾಡುವುದು ಸಾಧ್ಯವೂ ಇತ್ತು.

ಜನಸಂಖ್ಯೆಯ ದೃಷ್ಟಿಯಿಂದ ಪಾಕಿಸ್ತಾನಕ್ಕೆ ಹೋಗಬೇಕಾಗಿದ್ದ ಫಿರೋಜ್​ಪುರ್ ಜಿಲ್ಲೆ ಭಾರತಕ್ಕೆ ದಕ್ಕಿದ ಉದಾಹರಣೆಯನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಫಿರೋಜ್​ಪುರ್ ಪಾಕಿಸ್ತಾನಕ್ಕೆ ಹೋದರೆ ತನ್ನ ರಾಜ್ಯಕ್ಕೆ ಸಟ್ಲೆಜ್ ನದಿಯ ನೀರಿನ ಹರಿವು ಕತ್ತರಿಸಿಹೋಗುತ್ತದೆಂದೂ, ಹಾಗಾಗಿ ತನ್ನ ರಾಜ್ಯ ಆರ್ಥಿಕವಾಗಿ ಬಳಲುತ್ತದೆಂದು ಬಿಕಾನೇರ್​ನ ಮಹಾರಾಜ ಮೌಂಟ್​ಬ್ಯಾಟನ್​ರಿಗೆ ಮನವಿ ಮಾಡಿಕೊಂಡದ್ದರಿಂದಾಗಿ ಫಿರೋಜ್​ಪುರ್ ಜಿಲ್ಲೆಯನ್ನು ಭಾರತಕ್ಕೆ ನೀಡಲು ನಿರ್ಧರಿಸಲಾಯಿತು. ಈ ತೀರ್ವನವನ್ನು ಚಿತ್ತಗಾಂಗ್ ವಿಷಯದಲ್ಲಿ ತಿರುವುಮುರುವು ಮಾಡಿ, ಅಲ್ಲಿನ ಜನತೆಯ ಒಲವು ಭಾರತದ ಕಡೆಗಿರುವುದನ್ನು ಗೌರವಿಸಬೇಕೆಂದೂ, ದೇಶವಿಭಜನೆಯ ನಂತರ ಚಿತ್ತಗಾಂಗ್ ಅನ್ನು ಸಮುದ್ರ ಮಾರ್ಗದ ಮೂಲಕ ಕಲ್ಕತ್ತಾಗೆ ಬಂಧಿಸುವ ಕ್ರಮ ಕೈಗೊಳ್ಳುವುದಾಗಿ ಮೌಂಟ್​ಬ್ಯಾಟನ್​ರಿಗೆ ಆಶ್ವಾಸನೆ ಕೊಡುವುದು ನೆಹರುರಿಗೆ ಸಾಧ್ಯವಿತ್ತು. ಅವರ ಮಾತನ್ನು ವೈಸ್​ರಾಯ್ ತಳ್ಳಿಹಾಕುವ ಸಾಧ್ಯತೆ ಇರಲಿಲ್ಲ. ಆದರೆ ಚಿತ್ತಗಾಂಗ್ ಜನಪ್ರತಿನಿಧಿಗಳ ಪರವಾಗಿ ನೆಹರು ಏನೂ ಮಾಡಿದಂತೆ ಕಾಣುವುದಿಲ್ಲ. ಪರಿಣಾಮವಾಗಿ ಆ ಪ್ರದೇಶ ಪೂರ್ವ ಪಾಕಿಸ್ತಾನಕ್ಕೆ ಹೋಯಿತು. ರಾಷ್ಟ್ರಹಿತದ ಬಗ್ಗೆ ದೂರದೃಷ್ಟಿಯುಳ್ಳ ನೇತಾರರ ಕೈಗೆ 1947ರಲ್ಲಿ ಅಧಿಕಾರ ಸಿಕ್ಕಿದ್ದರೆ ಇಂದು ಚಿತ್ತಗಾಂಗ್ ನಮ್ಮದಾಗಿರುತ್ತಿತ್ತು. ಕಲ್ಕತ್ತಾದಿಂದ ಅಲ್ಲಿಗೆ ನೌಕಾಮಾರ್ಗ, ಅಲ್ಲಿಂದ ಪೂವೋತ್ತರ ಭಾರತದ ಎಲ್ಲ ರಾಜಧಾನಿಗಳಿಗೆ ರಸ್ತೆ ಮತ್ತು ರೈಲು ಸಂಪರ್ಕ ನಿರ್ವಿುಸಬಹುದಾಗಿತ್ತು. ಆಗ ಸಿಲಿಗುರಿ ಕಾರಿಡಾರ್​ನ ಮೇಲೆ ನಾವು ಪೂರ್ಣವಾಗಿ ಅವಲಂಬಿತರಾಗುವ ಅಗತ್ಯವಿರಲಿಲ್ಲ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net