ಕಂದಕಕ್ಕೆ ಉರುಳಿತು 55 ಪ್ರಯಾಣಿಕರಿದ್ದ ಟೂರಿಸ್ಟ್ ಬಸ್; 8 ಮಂದಿ ಸಾವು, 35 ಜನರಿಗೆ ಗಾಯ

bus (3)
Published on

ಚೆನ್ನೈ: ಐವತ್ತೈದು ಪ್ರಯಾಣಿಕರಿದ್ದ ಟೂರಿಸ್ಟ್ ಬಸ್ಸೊಂದು ಕಂದಕಕ್ಕೆ ಉರುಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಎಂಟು ಮಂದಿ ಸಾವಿಗೀಡಾಗಿದ್ದು, ಸುಮಾರು 35 ಜನರು ಗಾಯಗೊಂಡಿದ್ದಾರೆ. ತಮಿಳುನಾಡಿನ ಮರಪಲಂ ಎಂಬಲ್ಲಿ ಇಂದು ಸಂಜೆ ಈ ಅಪಘಾತ ಸಂಭವಿಸಿದೆ.

ಊಟಿಯಿಂದ ಹೊರಟಿದ್ದ ಈ ಟೂರಿಸ್ಟ್​ ಬಸ್​ ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಳ್ಯಂ ಕಡೆಗೆ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಕುನೂರ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಸುಮಾರು 100 ಅಡಿ ಆಳದ ಕಂದಕಕ್ಕೆ ಉರುಳಿದೆ.

ಪರಿಣಾಮವಾಗಿ, ಬಸ್​ನಲ್ಲಿದ್ದ ಸುಮಾರು 35 ಪ್ರಯಾಣಿಕರು ಗಾಯಗೊಂಡಿದ್ದು, ಆ ಪೈಕಿ ಕನಿಷ್ಠ 25 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಕುನೂರ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಅಪಘಾತದಲ್ಲಿ 8 ಮಂದಿ ಸಾವಿಗೀಡಾಗಿದ್ದಾರೆ. ಸತ್ತವರ ಪೈಕಿ ಮೂವರು ಮಹಿಳೆಯರು, ಐವರು ಪುರುಷರು ಎಂಬುದಾಗಿ ಕುನೂರ್ ಸರ್ಕಾರಿ ಆಸ್ಪತ್ರೆಯ ಜಂಟಿ ನಿರ್ದೇಶಕ ಪಳನಿ ಸ್ವಾಮಿ ತಿಳಿಸಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net