

ತಂಟೆಕೋರ ಚೀನಾ ಕೊನೆಗೂ ಮಣಿದಿದೆ. ಭಾರತದ ಬಿಗಿನಿಲುವು ಮತ್ತು ರಾಜತಾಂತ್ರಿಕ ಜಾಣ್ಮೆ ಫಲ ನೀಡಿದೆ. ವಿವಾದಿತ ಗಲ್ವಾನ್ ಕಣಿವೆ ಪ್ರದೇಶದಿಂದ ಚೀನೀ ಸೈನಿಕರು ಮರಳುವ ಪ್ರಕ್ರಿಯೆ ಭಾನುವಾರ ಆರಂಭಗೊಂಡಿದೆ. ಲಡಾಖ್ ಪ್ರದೇಶದ ಗಲ್ವಾನ್ ಕಣಿವೆಯಲ್ಲಿ ಅಪ್ರಚೋದಿತ ಘರ್ಷಣೆ ನಡೆಸಿದ್ದ ಚೀನಾ, ಗಡಿ ಪ್ರದೇಶದಲ್ಲಿ ಉದ್ವಿಗ್ನತೆ ಸೃಷ್ಟಿಸಿತ್ತು. ಭಾರತ ಮತ್ತು ಚೀನಾ ಯೋಧರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ 20 ಯೋಧರು ಹುತಾತ್ಮರಾದರೆ, ಚೀನಾ ತನ್ನ 40ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡಿತ್ತು. ಈ ಘಟನೆಯ ಬಳಿಕ ಉಭಯ ದೇಶಗಳ ಸೇನಾಧಿಕಾರಿಗಳ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆ ನಡೆದರೂ ತನ್ನ ಸೇನೆಯನ್ನು ಹಿಂದಕ್ಕೆ ಕರೆಯಿಸಿಕೊಳ್ಳಲು ಅದು ನಿರಾಕರಿಸುತ್ತಲೇ ಬಂದಿತ್ತು. ಕೆಲವೊಮ್ಮೆಯಂತೂ ಟೆಂಟ್ ಖಾಲಿ ಮಾಡುವುದಾಗಿ ಸುಳ್ಳು ಆಶ್ವಾಸನೆ ನೀಡಿದ್ದೂ ಉಂಟು. ಆದರೀಗ, ಚೀನಿ ಸೈನಿಕರು ಟೆಂಟ್ಗಳನ್ನು ತೆರವುಗೊಳಿಸಿ ಗಲ್ವಾನ್ ಕಣಿವೆಯಿಂದ 2 ಕಿ.ಮೀ.ನಷ್ಟು ಹಿಂದಕ್ಕೆ ಸರಿದಿದ್ದಾರೆ ಎಂಬುದನ್ನು ಅಧಿಕೃತ ಮೂಲಗಳು ದೃಢಪಡಿಸಿವೆ. ಈ ಮೂಲಕ ಕಳೆದ ಕೆಲ ತಿಂಗಳುಗಳಿಂದ ಸೃಷ್ಟಿಯಾಗಿದ್ದ ಉದ್ವಿಗ್ನತೆ ಕರಗಿ, ಪರಿಸ್ಥಿತಿ ಸಹಜತೆಗೆ ಮರಳುತ್ತಿದೆ.
ಹಠಮಾರಿ ಚೀನಾ ಇದ್ದಕಿದ್ದಹಾಗೆ ಈ ನಿರ್ಧಾರವೇನೂ ಕೈಗೊಂಡಿಲ್ಲ. ತನ್ನ ಗಡಿತಂಟೆಗೆ ಭಾರತ ಕಠಿಣವಾಗಿ ಉತ್ತರ ನೀಡದು ಅಂದುಕೊಂಡಿದ್ದ ಅದರ ನಿರೀಕ್ಷೆ ತಲೆಕೆಳಗಾಯಿತು. ಭಾರತೀಯ ಸೇನೆ ದಿಟ್ಟ ಉತ್ತರ ನೀಡಿತಲ್ಲದೆ, ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಲಡಾಖ್ಗೆ ಭೇಟಿ ನೀಡಿ ಸೈನಿಕರ ಮನೋಬಲ ಹೆಚ್ಚಿಸಿದರು. ಮಾತ್ರವಲ್ಲ, ಲಡಾಖ್ ಭಾರತಕ್ಕೆ ಸೇರಿದ್ದು ಎಂಬ ಸ್ಪಷ್ಟ ಸಂದೇಶವನ್ನು ಚೀನಾ ಮತ್ತು ಜಾಗತಿಕ ಸಮುದಾಯಕ್ಕೆ ರವಾನಿಸಿದರು. ಈ ಬೆಳವಣಿಗೆಯ ಬೆನ್ನಲ್ಲೇ ಭಾನುವಾರ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರೊಡನೆ ಎರಡು ಗಂಟೆಗಳ ಕಾಲ ವಿಡಿಯೋ ಕಾಲ್ ಮುಖಾಂತರ ಮಾತುಕತೆ ನಡೆಸಿ, ಶಾಂತಿ ಕಾಪಾಡುವ, ಗಡಿ ಒಪ್ಪಂದವನ್ನು ಗೌರವಿಸುವ ಕುರಿತಂತೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಈ ಮಾತುಕತೆ ಫಲಪ್ರದವಾದ ಕೆಲ ಗಂಟೆಗಳಲ್ಲೇ ಚೀನಾ ತನ್ನ ಸೈನಿಕರನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಪ್ರಕ್ರಿಯೆ ಆರಂಭಿಸಿತು ಎಂಬುದು ಗಮನಾರ್ಹ. ಅಲ್ಲದೆ, ಈ ಮಧ್ಯೆ ಗಲ್ವಾನ್ನಲ್ಲಿ ನದಿಯ ನೀರಿನ ಮಟ್ಟ ಹೆಚ್ಚಿದ್ದರಿಂದ ನೈಸರ್ಗಿಕ ಆಪತ್ತಿನ ಆತಂಕವೂ ಎದುರಾಗಿ ಚೀನೀ ಸೈನಿಕರು ಸಂದಿಗ್ಧತೆಗೆ ಸಿಲುಕಿದ್ದರು. ಗಡಿಯಲ್ಲಿ ಶಾಂತಿಯನ್ನು ಕಾಪಾಡಲು, ಅಧಿಕಾರಿ ಮಟ್ಟದ ಮಾತುಕತೆಗಳನ್ನು ಮುಂದುವರಿಸಲು, ಭವಿಷ್ಯದಲ್ಲಿ ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸುವ ಯಾವುದೇ ಕ್ರಮ ಕೈಗೊಳ್ಳದಿರಲು, ವಾಸ್ತವ ನಿಯಂತ್ರಣ ರೇಖೆಯನ್ನು ಗೌರವಿಸಲು ಎರಡೂ ದೇಶಗಳು ಸಹಮತಿ ವ್ಯಕ್ತಪಡಿಸಿವೆ. ಇಡೀ ಪ್ರಪಂಚ ಕರೊನಾ ಸೋಂಕಿನ ವಿರುದ್ಧ ಹೋರಾಡುತ್ತಿದ್ದರೆ, ಡ್ರಾ್ಯಗನ್ ರಾಷ್ಟ್ರ ಗಡಿತಂಟೆಯನ್ನು ತೆಗೆದು, ಅಶಾಂತಿ ಸೃಷ್ಟಿಸಲು ಯತ್ನಿಸಿತು. ಇನ್ನು ಮುಂದೆಯಾದರೂ ಇಂಥ ಉಪಟಳಗಳನ್ನು ಸೃಷ್ಟಿಸದೆ ಸಂಬಂಧ, ಒಪ್ಪಂದಗಳನ್ನು ಗೌರವಿಸುವ ಮನೋಭಾವ ತೋರಲಿ.