23ಕ್ಕೆ ಮಂಥರಾಂತರ ಯಕ್ಷಗಾನ ತಾಳಮದ್ದಲೆ

tth shilesh
ಶೈಲೇಶ್
Published on

ತೀರ್ಥಹಳ್ಳಿ: ಭಾರತೀಯ ಸಾಂಸ್ಕೃತಿಕ ಶ್ರೇಷ್ಠ ಪರಂಪರೆಯಲ್ಲಿ ಒಂದಾಗಿರುವ ಯಕ್ಷಗಾನ ಕಲೆಯು ನಾಟಕ ಸೇರಿ ರಂಗಭೂಮಿಯ ಇತರೆ ಪ್ರಕಾರಗಳ ಜತೆ ನಂಟು ಬೆಸೆಯುತ್ತಿರುವುದು ಹೆಗ್ಗಳಿಕೆಯ ಸಂಗತಿ ಎಂದು ಇಲ್ಲಿನ ಯಕ್ಷಗಾನ ಅಧ್ಯಯನ ಕೇಂದ್ರದ ಗುರು ಶೈಲೇಶ್ ತೀರ್ಥಹಳ್ಳಿ ಹೇಳಿದರು.
ಯಕ್ಷಗಾನ ಕೇವಲ ಮನರಂಜನೆಯ ಮಾಧ್ಯಮವಾಗಿರದೆ ಧಾರ್ಮಿಕ ಭಾವನೆಯನ್ನೂ ಮೂಡಿಸುವ ಶ್ರೇಷ್ಠ ಕಲೆ. ಈ ಕಲೆಯ ಪರಂಪರೆಯನ್ನು ಉಳಿಸಿ ಬೆಳೆಸುವ ಪ್ರಯತ್ನ ಯಕ್ಷಗಾನ ಅಧ್ಯಯನ ಕೇಂದ್ರದಿಂದ ನಡೆಯುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪ್ರಸ್ತುತ ಯಕ್ಷಗಾನ ಕಲೆ ರಂಗಭೂಮಿಯ ಜತೆಗೆ ನಂಟು ಬೆಸೆಯುತ್ತಿದ್ದು ಬೆಂಗಳೂರಿನ ಎನ್‌ಎಸ್‌ಡಿ, ಹೆಗ್ಗೋಡಿನ ನೀನಾಸಂ, ಮೈಸೂರು ಹಾಗೂ ಶಿವಮೊಗ್ಗದ ರಂಗಾಯಣ ಮತ್ತು ಸಾಣೇಹಳ್ಳಿ ಶಿವಕುಮಾರ ರಂಗಪ್ರಯೋಗ ಶಾಲೆ ಈ ಎಲ್ಲ ಕೇಂದ್ರಗಳಲ್ಲೂ ಯಕ್ಷಗಾನ ಕಲೆಯ ಬಗ್ಗೆ ವಿಶೇಷ ಆಸಕ್ತಿ ವ್ಯಕ್ತವಾಗುತ್ತಿದೆ ಎಂದರು.
ಯಕ್ಷಗಾನ ಅಧ್ಯಯನ ಕೇಂದ್ರದ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಜೂ.23 ರಂದು ಸಂಜೆ 5.30 ರಿಂದ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ. ಖ್ಯಾತ ಕಲಾವಿದರಿಂದ ಮಂಥರಾಂತರ ಯಕ್ಷಗಾನ ತಾಳಮದ್ದಲೆ ಮತ್ತು ಕೇಂದ್ರದ ಶಿಕ್ಷಣಾರ್ಥಿಗಳಿಂದ ಮೈಂದ ದ್ವಿವಿಧ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಶಾಸಕ ಆರಗ ಜ್ಞಾನೇಂದ್ರ, ಕೂಳೂರು ಸತ್ಯನಾರಾಯಣ ರಾವ್ ಮತ್ತು ನಟಮಿತ್ರರು ಹವ್ಯಾಸಿ ಕಲಾತಂಡದ ಅಧ್ಯಕ್ಷ ಸಂದೇಶ್ ಜವಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿರುತ್ತದೆ ಎಂದು ಹೇಳಿದರು.
ಯಕ್ಷಗಾನ ಗುರು ರೋಹಿತ್, ಕಲಾವಿದರಾದ ಶಿವಕುಮಾರ್, ವಾಣಿ ಕಾಮತ್, ನಿರಂಜನ ಪವಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net