

ಈಶಾನ್ಯಕ್ಕೆ ಜಲಮೂಲ ಇರಬೇಕೆಂಬ ನಿಯಮವಿಲ್ಲ: ಹಲವರು ಈಶಾನ್ಯ ದಿಕ್ಕಿನಲ್ಲೇ ಜಲಮೂಲ ಇರಬೇಕು ಎಂದು ಹೇಳುತ್ತಾರೆ. ಆದರೆ ಅದಕ್ಕೂ ಅಲ್ಲಿನ ಕಟ್ಟಡಕ್ಕೂ ಯಾವುದೇ ಸಂಬಂಧವಿಲ್ಲ. ಉದಾಹರಣೆಗೆ ಬೆಂಗಳೂರಿನ ಸದಾಶಿವನಗರದಲ್ಲಿರುವ ಸ್ಯಾಂಕಿ ಕೆರೆಯು ಅಲ್ಲಿನ ನಿವಾಸಿಗಳಿಗೆ ನೈಋತ್ಯಕ್ಕೆ ಬರುತ್ತದೆ. ಹಾಗೆಂದ ಮಾತ್ರಕ್ಕೆ ಅಲ್ಲಿನ ಜನರ ಚಟುವಟಿಕೆಗೆ ಅದರಿಂದ ತೊಂದರೆಯಾಗಿಲ್ಲ. ಹಾಗೆ ನೋಡಿದರೆ ನಗರದ ಪ್ರತಿಷ್ಠಿತ ಬಡಾವಣೆ ಎಂಬ ಹೆಗ್ಗಳಿಕೆ ಸದಾಶಿವನಗರಕ್ಕಿದೆ. ಇಲ್ಲಿನ ನಿವಾಸಿಗಳು, ರಾಜಕೀಯ, ಚಿತ್ರರಂಗ ಮತ್ತಿತರ ಕ್ಷೇತ್ರಗಳಲ್ಲಿ ಉನ್ನತ ಸ್ಥಾನವನ್ನು ಗಳಿಸಿದ್ದಾರೆ.
ಶಕ್ತಿ ಅಥವಾ ಚೈತನ್ಯದ (ಎನರ್ಜಿ) ಚಲನೆಗೆ ದಿಕ್ಕುಗಳ ಪ್ರತಿಬಂಧವಿಲ್ಲ. ಏಕೆಂದರೆ ಚೈತನ್ಯವು ಪೃಥ್ವಿಯಲ್ಲಿ ಸರ್ವವ್ಯಾಪಿಯಾಗಿದೆ. ಹೀಗಿರುವಾಗ ಶಕ್ತಿ ಸಂಚರಿಸುವ ದಿಕ್ಕನ್ನು ನಿಗದಿ ಮಾಡಿ ಹೇಳುವುದು ತಪ್ಪು ಕಲ್ಪನೆ. ಭಗವದ್ಗೀತೆಯ 2ನೇ ಅಧ್ಯಾಯದ 22ನೇ ಶ್ಲೋಕದಲ್ಲಿ ನಿಖರವಾಗಿ ಹೇಳಿರುವಂತೆ ‘ಯಾವುದೇ ಶಸ್ತ್ರದಿಂದ ಛೇದಿಸಲಾಗದ, ಬೆಂಕಿಯಲ್ಲಿ ಸುಡಲಾಗದ, ಬಿಸಿಲಿನಲ್ಲಿ ಒಣಗಿಸಲಾಗದ, ಗಾಳಿಯಲ್ಲಿ ಹಾರಿಸಲಾಗದ, ನೀರಿನಲ್ಲಿ ಮುಳುಗಿಸಲಾಗದ್ದನ್ನು ಚೈತನ್ಯ’ ಅಥವಾ ಎನರ್ಜಿ ಎನ್ನಲಾಗಿದೆ. ಅದನ್ನು ನಿಗದಿತ ದಿಕ್ಕಿಗೆ ಸೀಮಿತ ಮಾಡಲು ಸಾಧ್ಯವಿಲ್ಲ. ಆದರೆ ಕೆಲ ಪಂಡಿತರು ಚೈತನ್ಯ ಶಕ್ತಿಯನ್ನು ಪಾಸಿಟಿವ್ ಮತ್ತು ನೆಗೆಟಿವ್ ಆಗಿ ವಿವರಿಸುತ್ತಾರೆ. ಇದು ತಪ್ಪು. ದಿಕ್ಕಿಗನುಗುಣವಾಗಿ ಭಾರ, ನೀರು ಹರಿಯುವಿಕೆ ಅನಗತ್ಯ.
ಸಾಮಾನ್ಯವಾಗಿ ನಮ್ಮ ಬಳಿ ವಾಸ್ತು ವಿನ್ಯಾಸಕ್ಕಾಗಿ ಬರುವವರಲ್ಲಿ ಅನೇಕರು ನೈಋತ್ಯ ಭಾಗವನ್ನು ಭಾರವಾಗುವಂತೆ ವಿನ್ಯಾಸ ಮಾಡಿಕೊಡಲು ಕೇಳುತ್ತಾರೆ. ಆದರೆ ಮನೆ ನಿರ್ವಿುಸುವಾಗ ನೈಋತ್ಯ ಭಾಗಕ್ಕೆ ಎನರ್ಜಿ ಕಡಿಮೆ ಮಾಡಬೇಕೆಂಬ ಉದ್ದೇಶದಿಂದ ಗೋಡೆಯನ್ನು ಎತ್ತರಿಸುವುದು, ಹೆಚ್ಚಿಸುವುದು ಸರಿಯಾದ ಕ್ರಮವಲ್ಲ. ಬದಲಾಗಿ ಗೋಡೆಯನ್ನು ಹೆಚ್ಚಿಸುವುದು ಅಥವಾ ಖಾಲಿ ಬಿಡುವುದಕ್ಕೆ ಶಾಸ್ತ್ರಬದ್ಧವಾದ ಒಂದು ಪ್ರಮಾಣವಿದೆ. ಗೋಡೆಗಳಿಂದ ಸಿಗುವ ಅವಕಾಶಗಳನ್ನು ಬಳಸಿಕೊಳ್ಳುವ ನೈಪುಣ್ಯ ವಾಸ್ತುಶಿಲ್ಪಿಯಲ್ಲಿರಬೇಕು. ಅದೇ ರೀತಿ ನಿವೇಶನಗಳಲ್ಲಿ ಮಳೆನೀರು, ತ್ಯಾಜ್ಯನೀರು ನಿಗದಿತ ದಿಕ್ಕಿನಲ್ಲೇ ಹರಿಯುವಂತೆ ಜಾಗವನ್ನು ರೂಪಿಸಲು ಹೇಳುತ್ತಾರೆ. ಆದರೆ ಅದು ಕೂಡ ವಾಸ್ತುಗೆ ಸಂಬಂಧವಿಲ್ಲ.
ಕೈಗಾರಿಕಾ ಪ್ರದೇಶಗಳಲ್ಲಿ ಬೃಹತ್ ಕೈಗಾರಿಕೆಗಳಿಂದ ಪ್ರತಿದಿನ ಹೊರಬರುವ ದೊಡ್ಡ ಪ್ರಮಾಣದ ತ್ಯಾಜ್ಯದ ನೀರನ್ನು ಅಲ್ಲಿನ ಭೂವಿಸ್ತಾರಕ್ಕೆ ಅನುಗುಣವಾಗಿ ಹರಿಯಲು ಅನುವು ಮಾಡಿಕೊಡಬೇಕೆ ವಿನಃ ವಾಸ್ತು ಹೆಸರಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಕಾಲುವೆ ಅಥವಾ ಪೈಪ್ಗಳನ್ನು ಅಳವಡಿಸುವ ಅಗತ್ಯವಿಲ್ಲ. ಕೈಗಾರಿಕೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೂ ತ್ಯಾಜ್ಯ ನೀರಿನ ಹರಿವಿಗೂ ವಾಸ್ತು ಹಿನ್ನೆಲೆಯಲ್ಲಿ ಯಾವುದೇ ಸಂಬಂಧವಿರುವುದಿಲ್ಲ. ಈ ವಾಸ್ತವಾಂಶದ ನೆಲೆಗಟ್ಟಿನಲ್ಲಿ ನಾವು ಹಲವಾರು ಕೈಗಾರಿಕಾ ಘಟಕಗಳ ವಾಸ್ತು ವಿನ್ಯಾಸ ಮಾಡಿದ್ದೇವೆ. ಆ ಯಾವುದೇ ಕೈಗಾರಿಕೆಗಳು ಯಾವುದೇ ನಷ್ಟವಿಲ್ಲದೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವುದು ಅದಕ್ಕೆ ಸಾಕ್ಷಿಯಾಗಿದೆ.
ಕಟ್ಟಡದೊಳಗಿನ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಇದೆಯೇ ಹೊರತು ಹೊರಗಿನ ನಿವೇಶನದಲ್ಲಿನ ಲ್ಯಾಂಡ್ಸ್ಕೇಪ್ ವಾಸ್ತು ದೃಷ್ಟಿಯಿಂದ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಈ ಅಂಶವನ್ನು ಮನೆ ಕಟ್ಟಿಸುವವರು ಅರ್ಥಮಾಡಿಕೊಳ್ಳುವುದು ತೀರ ಅಗತ್ಯವಾಗಿದೆ.