

| ನವೀನ್ ಬಿಲ್ಗುಣಿ ಶಿವಮೊಗ್ಗ
ರಾಜ್ಯದಲ್ಲಿ ಅಫೀಮು ಬೆಳೆಯಲು ಅನುಮತಿ ಸಿಕ್ಕಿದೆಯಾ? ರೈತರು ನಾಟಿ ಗಾಂಜಾವನ್ನೂ ಬೆಳೆಯಬಹುದಾ? ನಿಷೇಧಿತ ನೀಲಗಿರಿ ಕೂಡ ಬೆಳೆಯುವುದಕ್ಕೆ ಅವಕಾಶವಿದೆಯೇ?...
ಕೃಷಿ ಇಲಾಖೆಯ ಎಡವಟ್ಟಿನಿಂದ ಇಂತಹದೊಂದು ಪ್ರಶ್ನೆ ರೈತರನ್ನು ಕಾಡುತ್ತಿದೆ. ಪ್ರಸಕ್ತ ವರ್ಷ ಅನಾವೃಷ್ಟಿಯ ಬಳಿಕ ಅತಿವೃಷ್ಟಿ ಸಂಕಷ್ಟ ರಾಜ್ಯಾದ್ಯಂತ ಎದುರಾಗಿದೆ. ಮುಂಗಾರು ಋತುವಿಗೆ ರೈತರೇ ನೇರವಾಗಿ ಮೊಬೈಲ್ಗಳ ಮೂಲಕ ಬೆಳೆ ಸಮೀಕ್ಷೆ ಮಾಡಿಕೊಳ್ಳಬಹುದು. ಆದರೆ ಬೆಳೆ ಕಾಲಂನಲ್ಲಿ ನಿಷೇಧಿತ ಬೆಳೆಗಳ ಹೆಸರೂ ಸೇರ್ಪಡೆಗೊಂಡಿರುವುದು ರೈತರಲ್ಲಿ ಅಚ್ಚರಿ ಮೂಡಿಸಿದೆ.
2024-25ನೇ ಸಾಲಿನ ಮುಂಗಾರು ಋತುವಿನ ಬೆಳೆ ಸಮೀಕ್ಷೆಗೆ ಕೃಷಿ ಇಲಾಖೆ ಮೊಬೈಲ್ ಆಪ್ ಬಿಡುಗಡೆ ಮಾಡಿದೆ. ಅದರಲ್ಲಿ ಆಧಾರ್ ಇ-ಕೆವೈಸಿ ಬಳಿಕ ಮಳೆಯಾಶ್ರಿತ ಅಥವಾ ನೀರಾವರಿ ವಿಧ ಆಯ್ಕೆಯನ್ನೂ ಕೇಳುತ್ತದೆ. ವಾರ್ಷಿಕ ಬೆಳೆ ಕಾಲಂನಲ್ಲಿ ನೂರಾರು ಬೆಳೆಗಳ ಹೆಸರನ್ನೂ ಸೇರ್ಪಡೆ ಮಾಡಿದೆ. ಆದರೆ ಅವುಗಳ ನಡುವೆ ಅಫೀಮು, ನಾಟಿ ಗಾಂಜಾ, ನೀಲಗಿರಿಯನ್ನೂ ಸೇರಿಸಲಾಗಿದೆ. ಸರ್ಕಾರ ಸೃಜಿಸಿದ ಆಪ್ನಲ್ಲಿ ಇವು ಸೇರ್ಪಡೆಗೊಂಡಿದ್ದು ಹೇಗೆ ಎಂಬುದು ಪ್ರಶ್ನೆಯಾಗಿದೆ.
ಬೆಳೆ ಸಮೀಕ್ಷೆ ಉದ್ದೇಶ: ‘ನನ್ನ ಬೆಳೆ ನನ್ನ ಹಕ್ಕು’ ಇದು ರೈತರೇ ತಾನು ಬೆಳೆದ ಬೆಳೆಯ ಸಮೀಕ್ಷೆ ಮಾಡಿ ವಿವರವನ್ನು ಸರ್ಕಾರಕ್ಕೆ ನೀಡಲು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ.
ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆಗಳಿಂದ ಪಹಣಿ(ಆರ್ಟಿಸಿ)ಯಲ್ಲಿ ಯಾವ ಬೆಳೆ ದಾಖಲಾಗಿದೆ ಎನ್ನುವುದರ ಆಧಾರದ ಮೇಲೆ ರೈತರಿಗೆ ಸೌಲಭ್ಯ ನೀಡಲಾಗುತ್ತಿತ್ತು. ಆದರೆ ಸಕಾಲಕ್ಕೆ ಪಹಣಿಯಲ್ಲಿ ಬೆಳೆ ನಮೂದಾಗದೆ ಸರ್ಕಾರಿ ಸೌಲಭ್ಯ ಪಡೆಯುವಲ್ಲಿ ರೈತರು ವಂಚಿತರಾಗುತ್ತಿದ್ದರು. ಅದನ್ನು ತಪ್ಪಿಸಲು ಆಪ್ ಸಿದ್ಧಪಡಿಸಲಾಗಿದೆ. ಅಲ್ಲದೆ ಎನ್ಡಿಆರ್ಎಫ್, ಎಸ್ಡಿಆರ್ಎಫ್ ಯೋಜನೆಗಳಡಿ ಇನ್ಪುಟ್ ಸಬ್ಸಿಡಿ ಯೋಜನೆಯಲ್ಲಿ ಫಲಾನುಭವಿಗಳ ಪಟ್ಟಿ ತಯಾರಿಸುವುದು, ಬ್ಯಾಂಕ್ಗಳಲ್ಲಿ ರೈತರಿಗೆ ಬೆಳೆ ಸಮೀಕ್ಷೆ ಆಧಾರಿತ ದತ್ತಾಂಶ ಪರಿಗಣಿಸಿ ಬೆಳೆ ಸಾಲ ಮಂಜೂರಿಗೆ ಸಹಾಯಕವಾಗುತ್ತದೆ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.
ಅಫೀಮು-196, ನಾಟಿಗಾಂಜಾ-203, ನೀಲಗಿರಿ-250 ಸೇರಿ ರಕ್ತಚಂದನ-310, ಸೇರಿ ನೂರಕ್ಕೂ ಅಧಿಕ ಬೆಳೆಗಳ ಮಾಹಿತಿಯನ್ನು ಬೆಳೆ ಸಮೀಕ್ಷೆ ಆಪ್ನಲ್ಲಿ ಸೇರ್ಪಡೆ ಮಾಡಲಾಗಿದೆ.
ಎನ್ಐಸಿ(ನ್ಯಾಷನಲ್ ಇನ್ಪಾರ್ವೆಟಿಕ್ ಸೆಂಟರ್) ಬೆಳೆ ಸಮೀಕ್ಷೆ ಸಾಫ್ಟ್ವೇರ್ ಅಭಿವೃದ್ಧಿಪಡಿಸಿದೆ. ಅದನ್ನು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ನೋಡಿಕೊಳ್ಳುತ್ತಿವೆ. ರೈತರ ಬೆಳೆ ಸಮೀಕ್ಷೆ ಆಪ್ನಲ್ಲಿ ನಿಷೇಧಿತ ಬೆಳೆಗಳ ಮಾಹಿತಿ ಇರುವುದು ಗಮನಕ್ಕೆ ಬಂದಿಲ್ಲ. ಈ ಸಂಬಂಧ ಮೇಲಧಿಕಾರಿ ಗಮನಕ್ಕೆ ತರಲಾಗುವುದು. | ಹೆಸರು ಹೇಳಲಿಚ್ಛಿಸದ ಕೃಷಿ ಅಧಿಕಾರಿ