

ವಾಷಿಂಗ್ಟನ್: ಗಗನಯಾತ್ರೆಗೆ ತೆರಳಿ ಹಲವು ತಿಂಗಳುಗಳಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್ಎಸ್)ದಲ್ಲಿ ಆಶ್ರಯ ಪಡೆದುಕೊಂಡಿರುವ ‘ನಾಸಾ’ದ ಗಗನಯಾತ್ರಿಗಳಾದ ಸುನಿತಾ ವಿಲಿಯಮ್್ಸ ಮತ್ತು ಬುಚ್ ವಿಲ್ಮೋರ್ ಕೊನೆಗೂ ಇದೇ ವಾರದಲ್ಲಿ ಭೂಮಿಗೆ ಮರಳಲಿದ್ದಾರೆ.
ಎಲ್ಲವೂ ಅಂದುಕೊಂಡಂತೆಯೇ ಆದಲ್ಲಿ ಇವರು ಮಾ.16ಕ್ಕೆ ಭೂಮಿಗೆ ತಲುಪಲಿದ್ದಾರೆ. ಬೋಯಿಂಗ್ ಸ್ಟಾರ್ಲೈನರ್ನಲ್ಲಿ 2024ರ ಜೂ.5ರಂದು ಗಗನಯಾತ್ರೆಗೆ ತೆರಳಿದ್ದ ಇವರು, ಅಂತರಿಕ್ಷ ವಾಹನದಲ್ಲಿನ ಸಮಸ್ಯೆಯಿಂದಾಗಿ ಹಿಂದಿರುಗಲಾಗದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಆಶ್ರಯ ಪಡೆದಿದ್ದಾರೆ. ಸ್ಟಾರ್ಲೈನರ್ನಲ್ಲಿ ಇವರು ಹಿಂದಿರುಗುವುದು ಅಪಾಯಕಾರಿ ಎಂಬ ಹಿನ್ನೆಲೆಯಲ್ಲಿ ಉದ್ಯಮಿ ಎಲಾನ್ ಮಸ್ಕ್ ಅವರ ಸ್ಪೇಸ್ಎಕ್ಸ್ ಕಂಪನಿಯ ಕ್ರ್ಯೂ10 ಇವರನ್ನು ಕರೆತರಲಿದೆ.
ಈ ಅಂತರಿಕ್ಷ ವಾಹನದ ಹಾರಾಟಕ್ಕೆ ಇದೀಗ ಅಮೆರಿಕನ್ ಸ್ಪೇಸ್ ಏಜೆನ್ಸಿ ಅನುಮತಿ ಸಿಕ್ಕಿದೆ. ಇದಕ್ಕೂ ಮೊದಲು ನಾಸಾದ ಇಬ್ಬರು ಗಗನಯಾತ್ರಿಗಳನ್ನು ಒಳಗೊಂಡ ಕ್ರ್ಯೂ9 ಕಳೆದ ಸೆಪ್ಟೆಂಬರ್ನಲ್ಲಿ ಐಎಸ್ಎಸ್ಗೆ ಕಳುಹಿಸಿಕೊಡಲಾಗಿತ್ತು. ಇದು ಫೆಬ್ರವರಿಯಲ್ಲಿ ಇವರನ್ನು ಕರೆದುಕೊಂಡು ಭಾರತಕ್ಕೆ ಮರಳುವುದು ಎಂದು ಕೂಡ ನಿಗದಿಪಡಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಕ್ರ್ಯೂ9 ಬದಲು ಕ್ರ್ಯೂ10 ಅಂತರಿಕ್ಷ ವಾಹನವನ್ನು ಮಾ.12ರಂದು ಕಳುಹಿಸಿ ಇವರನ್ನು ವಾಪಸ್ ಕರೆಸಿಕೊಳ್ಳಲಾಗುತ್ತದೆ. ಮಾ.13ರಂದು ಕ್ರ್ಯೂ10 ವಾಪಸ್ ಹೊರಡಲಿದ್ದು, ಎರಡು ದಿನಗಳ ಬಳಿಕ ಕ್ರ್ಯೂ9 ಕೂಡ ಹಿಂದಿರುಗಲಿದೆ. ಇವರನ್ನು ವಾಪಸ್ ಕರೆತರುವ ಸಲುವಾಗಿ ಕ್ರ್ಯೂ10ನ ಸಂಪೂರ್ಣ ರಿಹರ್ಸಲ್ ನಡೆಸಲಾಗಿದೆ ಎಂದು ನಾಸಾ ತಿಳಿಸಿದೆ.