

Shubhanshu Shukla : ಐತಿಹಾಸಿಕ ಬಾಹ್ಯಾಕಾಶ ಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಿದ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಇಂದು ಭೂಮಿಗೆ ಬಂದಿಳಿದರು. ಆಕ್ಸಿಯಮ್-4 ಸಿಬ್ಬಂದಿಯನ್ನು ಹೊತ್ತ ಸ್ಪೇಷ್ ಎಕ್ಸ್ ಗ್ರೇಸ್ ಕ್ಪಾಪ್ಸುಲ್ ಸ್ಯಾನ್ ಡಿಯಾಗೋ ಬಳಿಯ ಕ್ಯಾಲಿಫೋರ್ನಿಯಾದ ಕರಾವಳಿಯಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಯಶಸ್ವಿಯಾಗಿ ಇಳಿಯಿತು.
ಭಾರತೀಯ ವಾಯುಪಡೆಯ ಪೈಲಟ್ ಆಗಿರುವ ಗ್ರೂಪ್ ಕ್ಯಾಪ್ಟನ್ ಶುಕ್ಲಾ, 1984 ರಲ್ಲಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾರ ಬಳಿಕ ಬಾಹ್ಯಾಕಾಶಕ್ಕೆ ಭೇಟಿ ನೀಡಿದ ಎರಡನೇ ಭಾರತೀಯನೆಂಬ ದಾಖಲೆ ಸೃಷ್ಟಿಸಿದ್ದಾರೆ. ಈ ಕಾರ್ಯಾಚರಣೆಗೆ ಭಾರತ ಸುಮಾರು 70 ಮಿಲಿಯನ್ ಡಾಲರ್ ವ್ಯಯಿಸಿದೆ. ಈ ಒಂದು ಐತಿಹಾಸಿಕ ಭೇಟಿಗೆ ನಾಸಾ ಮತ್ತು ಇಸ್ರೋಗೆ ಮಧ್ಯವರ್ತಿಯಾಗಿ ಖಾಸಗಿ ಬಾಹ್ಯಾಕಾಶ ಕಂಪನಿ ಆಕ್ಸಿಯಮ್ ಸ್ಪೇಸ್ ಕೆಲಸ ಮಾಡಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದೊಂದಿಗೆ ಡಾಕಿಂಗ್ ಮಾಡಿದಾಗಿನಿಂದ ಸುಮಾರು 12.2 ಮಿಲಿಯನ್ ಕಿಲೋಮೀಟರ್ಗಳನ್ನು ಕ್ರಮಿಸಿ ಭೂಮಿಯ ಸುತ್ತ ಸರಿಸುಮಾರು 433 ಗಂಟೆಗಳು, 18 ದಿನಗಳು ಮತ್ತು 288 ಕಕ್ಷೆಗಳನ್ನು ಸುತ್ತಿದ ಬಳಿಕ ಆಕ್ಸಿಯಮ್ ಮಿಷನ್ 4 (ಆಕ್ಸ್-4) ಸಿಬ್ಬಂದಿ ಅಧಿಕೃತವಾಗಿ ಮನೆಗೆ ತೆರಳಿದ್ದಾರೆ.
ಕ್ಯಾಪ್ಸುಲ್ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಪ್ರಯಾಣಿಸಲು ಸುಮಾರು 22.5 ಗಂಟೆಗಳನ್ನು ತೆಗೆದುಕೊಂಡಿದೆ. ಗ್ರೂಪ್ ಕ್ಯಾಪ್ಟನ್ ಶುಕ್ಲಾ ಜೊತೆಗೆ ಅಮೆರಿಕದ ಗಗನಯಾತ್ರಿ ಕಮಾಂಡರ್ ಪೆಗ್ಗಿ ವಿಟ್ಸನ್ ಮತ್ತು ಮಿಷನ್ ಸ್ಪೆಷಲಿಸ್ಟ್ಗಳಾದ ಪೋಲೆಂಡ್ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿಯೆವ್ಸ್ಕಿ ಮತ್ತು ಹಂಗೇರಿಯ ಟಿಬೋರ್ ಕಾಪು ಕೂಡ ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಅಂದಹಾಗೆ, ಆಕ್ಸಿಯಮ್ ಸ್ಪೇಸ್ ಹೇಳುವಂತೆ ಆಕ್ಸ್-4 ಕೇವಲ ವೈಜ್ಞಾನಿಕ ಯಶಸ್ಸು ಮಾತ್ರವಲ್ಲದೆ ಭಾರತ, ಪೋಲೆಂಡ್ ಮತ್ತು ಹಂಗೇರಿಗೆ ಐತಿಹಾಸಿಕ ಮೈಲಿಗಲ್ಲು ಕೂಡ ಆಗಿದೆ. ನಾಲ್ಕು ದಶಕಗಳಲ್ಲಿ ಇದೇ ಮೊದಲ ಬಾರಿಗೆ, ಈ ರಾಷ್ಟ್ರಗಳು ತಮ್ಮ ರಾಷ್ಟ್ರೀಯ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿವೆ. ಅಲ್ಲದೆ, ಇದೇ ಮೊದಲ ಬಾರಿಗೆ, ತಮ್ಮ ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸಿಸಿ, ಅಲ್ಲಿ ಪ್ರಯೋಗಳನ್ನು ಸಹ ಮಾಡಿದ್ದಾರೆ. ಈ ಕಾರ್ಯಾಚರಣೆಯು ಈ ರಾಷ್ಟ್ರಗಳಿಗೆ ಬಾಹ್ಯಾಕಾಶ ಪರಿಶೋಧನೆಯಲ್ಲಿ ಹೊಸ ಅಧ್ಯಾಯವನ್ನು ಗುರುತಿಸಿದೆ. ಅಲ್ಲದೆ, ಭವಿಷ್ಯದ ಕಾರ್ಯಾಚರಣೆಗಳಿಗೆ ಇದು ದಾರಿ ಮಾಡಿಕೊಟ್ಟಿದೆ. ಬಹು ಮುಖ್ಯವಾಗಿ ಜಾಗತಿಕ ಬಾಹ್ಯಾಕಾಶ ಸಮುದಾಯದಲ್ಲಿ ವ್ಯಾಪಕ ಭಾಗವಹಿಸುವಿಕೆಯನ್ನು ಇದು ಪ್ರೇರೇಪಿಸಿದೆ.
18 ದಿನಗಳ ಕಾಲ ಬಾಹ್ಯಾಕಾಶದಲ್ಲಿದ್ದ ಆಕ್ಸ್-4 ಸಿಬ್ಬಂದಿ, ಅಲ್ಲಿನ ವೈಜ್ಞಾನಿಕ ದತ್ತಾಂಶ ಮತ್ತು ಪುರಾವೆಗಳನ್ನು ಮರಳಿ ಭೂಮಿಗೆ ತಂದಿದ್ದಾರೆ. ಈ ಒಂದು ಮಿಷನ್ ಭಾರತವನ್ನು ಜಾಗತಿಕ ಬಾಹ್ಯಾಕಾಶ ಸಮುದಾಯದಲ್ಲಿ ಗಂಭೀರ ಸ್ಪರ್ಧಿಯಾಗಿ ಇರಿಸಿದೆ. ರಾಕೇಶ್ ಶರ್ಮಾ ಅವರು ಸೋವಿಯತ್ ಬಾಹ್ಯಾಕಾಶ ನಿಲ್ದಾಣ ಸಲ್ಯುಟ್ -7 ನಲ್ಲಿ ಬಾಹ್ಯಾಕಾಶದಲ್ಲಿ ಏಳು ದಿನಗಳಿಗಿಂತ ಸ್ವಲ್ಪ ಹೆಚ್ಚು ಕಾಲ ಕಳೆದರು. ಈಗ, ಶುಕ್ಲಾ ISSಗೆ ಭೇಟಿ ನೀಡಿದ ಮೊದಲ ಭಾರತೀಯರಾಗಿದ್ದು, ಸುಮಾರು ಮೂರು ವಾರಗಳನ್ನು ಬಾಹ್ಯಾಕಾಶದಲ್ಲಿ ಯಶಸ್ವಿಯಾಗಿ ಕಳೆದಿದ್ದಾರೆ.
ಐಎಸ್ಎಸ್ನಲ್ಲಿದ್ದಾಗ, ಶುಕ್ಲಾ ಅವರು ಭಾರತದ 7 ನಿರ್ದಿಷ್ಟ ಮೈಕ್ರೋಗ್ರಾವಿಟಿ ಪ್ರಯೋಗಗಳನ್ನು ನಡೆಸಿದರು. ಇದು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತದ ಬೆಳೆಯುತ್ತಿರುವ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತದೆ. ಭವಿಷ್ಯದ ಗ್ರಹ ಕಾರ್ಯಾಚರಣೆಗಳು ಮತ್ತು ದೀರ್ಘಾವಧಿಯ ಬಾಹ್ಯಾಕಾಶ ವಾಸಕ್ಕಾಗಿ ನಿರ್ಣಾಯಕ ಡೇಟಾವನ್ನು ಉತ್ಪಾದಿಸಲು ಈ ಪ್ರಯೋಗಗಳನ್ನು ವಿನ್ಯಾಸಗೊಳಿಸಲಾಗಿತ್ತು. ಗುರುತ್ವಾಕರ್ಷಣೆಗೆ ಹೊಂದಿಕೊಳ್ಳಲು ಗ್ರೂಪ್ ಕ್ಯಾಪ್ಟನ್ ಶುಕ್ಲಾ ಈಗ ಸುಮಾರು ಒಂದು ವಾರದ ವೈದ್ಯಕೀಯ ಪುನರ್ವಸತಿಗೆ ಒಳಗಾಗಲಿದ್ದಾರೆ. (ಏಜೆನ್ಸೀಸ್)