ಭೂಮಿಯತ್ತ ಬರುತ್ತಿದೆ ಕ್ಷುದ್ರಗ್ರಹ; 2032ರ ಡಿ. 22ರಂದು ಭೂಮಿಗೆ ಅಪ್ಪಳಿಸುವ ಸಾಧ್ಯತೆ

Planet
Published on

ನವದೆಹಲಿ: ಇತ್ತೀಚೆಗೆ ಪತ್ತೆಯಾದ 2024 ವೈಆರ್4 ಎಂಬ ಕ್ಷುದ್ರಗ್ರಹ ಮುಂದಿನ ಕೆಲವೇ ವರ್ಷಗಳಲ್ಲಿ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ.

ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಶೇ. 3.1ರಷ್ಟು ಇರುವ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಕ್ಷುದ್ರಗ್ರಹ ಎಚ್ಚರಿಕೆ ಜಾಲ (ಐಎಡಬ್ಲ್ಯೂಎನ್) ಎಚ್ಚರಿಕೆ ನೀಡಿದೆ. ಈ ಕ್ಷುದ್ರಗ್ರಹ 2032ರ ಡಿಸೆಂಬರ್ 22ರಂದು ಭೂಮಿಯ ವಾತಾವರಣ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ. ಈ ಕ್ಷುದ್ರಗ್ರಹ ಭೂಮಿಯ ವಾತಾವರಣವನ್ನು ಪ್ರವೇಶಿಸಿದರೆ ಭಾರತದ ಮುಂಬೈ, ಕೋಲ್ಕತ್ತಾ, ಬಾಂಗ್ಲಾ ರಾಜಧಾನಿ ಢಾಕಾ, ಕೊಲಂಬಿಯಾದ ರಾಜಧಾನಿ ಬೊಗೊಟಾ, ಕೋಟ್ ಡಿ ಐವೊಯಿರ್ ನಗರ ಅಬಿಡ್ಜನ್, ನೈಜೀರಿಯಾದ ಲಾಗೋಸ್, ಸುಡಾನ್ ರಾಜಧಾನಿ ಖಾರ್ಟೌಮ್ ನಗರಗಳಿಗೆ ಹಾನಿಯಾಗಲಿದೆ. ಈ ನಗರಗಳ ಜನಸಂಖ್ಯೆ 11 ಕೋಟಿಯಷ್ಟಿದ್ದು, ಕ್ಷುದ್ರಗ್ರಹ ಅಪ್ಪಳಿಸಿದರೆ ಲಕ್ಷಾಂತರ ಜನರು ಸಾವನ್ನಪು್ಪವ ಸಾಧ್ಯತೆ ಇದೆ ಎಂದು ನಾಸಾ ತಿಳಿಸಿದೆ.

ಬಾಹ್ಯಾಕಾಶದಲ್ಲೇ ನಾಶಪಡಿಸಬಹುದು: ಕ್ಷುದ್ರಗ್ರಹ ಅಪ್ಪಳಿಸಲು ಇನ್ನೂ ಸಾಕಷ್ಟು ಸಮಯ ಇರುವುದರಿಂದ ಕ್ಷುದ್ರಗ್ರಹವನ್ನು ಬಾಹ್ಯಾಕಾಶದಲ್ಲೇ ನಾಶಪಡಿಸಬಹುದು. ನಾಸಾ ಈಗಾಗಲೇ 2022ರಲ್ಲಿ ಡಿಎಆರ್​ಟಿ ಯೋಜನೆಯಲ್ಲಿ ಪುಟ್ಟ ಕ್ಷುದ್ರಗ್ರಹದ ಪಥವನ್ನು ಬದಲಿಸಿತ್ತು. ಹಾಗಾಗಿ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸುವ ಅಪಾಯ ಇನ್ನೂ ಅನಿಶ್ಚಿತತೆಯಿಂದ ಕೂಡಿದೆ ಎಂದು ತಜ್ಞರು ತಿಳಿಸಿದ್ದಾರೆ. 66 ಮಿಲಿಯನ್ ವರ್ಷಗಳ ಹಿಂದೆ 6 ಮೈಲಿ ಅಗಲದ ಕ್ಷುದ್ರಗ್ರಹ ಭೂಮಿಗೆ ಅಪ್ಪಳಿಸಿ ಡೈನೋಸಾರ್​ಗಳು ನಾಶವಾಗಿದ್ದವು. ಈಗ ಭೂಮಿಗೆ ಅಪ್ಪಳಿಸುವ ಸಾಧ್ಯತೆ ಇರುವ ಕ್ಷುದ್ರಗ್ರಹ ಪ್ರಮುಖ ನಗರಗಳಿಗೆ ಹಾನಿ ಉಂಟು ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಾಸಾ ಈ ಕ್ಷುದ್ರಗ್ರಹದ ಮೇಲೆ ನಿಗಾ ಇರಿಸಲಿದೆ.

ಅಣುಬಾಂಬ್​ಗಿಂತ 500 ಪಟ್ಟು ತೀವ್ರತೆ: 2024 ವೈಆರ್4 ಕ್ಷುದ್ರಗ್ರಹ 130ರಿಂದ 300 ಅಡಿ ಅಗಲ ಇದ್ದು, ಇದು ಗಂಟೆಗೆ 40 ಸಾವಿರ ಮೈಲಿ ವೇಗದಲ್ಲಿ ಸಂಚರಿಸುತ್ತಿದ್ದು, ಇದೇ ವೇಗದಲ್ಲಿ ಭೂಮಿಗೆ ಅಪ್ಪಳಿಸಿದರೆ ಅಪಾರ ಹಾನಿಯುಂಟಾಗಲಿದೆ. ಕ್ಷುದ್ರಗ್ರಹ ಭೂಮಿಯ ವಾತಾವರಣ ಪ್ರವೇಶಿಸಿದಾಗ ಘರ್ಷಣೆಯಿಂದ ಸ್ಪೋಟಗೊಳ್ಳುವ ಸಾಧ್ಯತೆಯೂ ಇದೆ. ಕ್ಷುದ್ರಗ್ರಹ ಸ್ಪೋಟಗೊಂಡರೆ ಅದರ ತೀವ್ರತೆ 8 ಮೆಗಾಟನ್ಸ್ ಆಫ್ ಟಿಎನ್​ಟಿ ಇರುವ ಸಾಧ್ಯತೆ ಇದೆ, ಇದು ಹಿರೋಶಿಮಾ ಮೇಲೆ ಪ್ರಯೋಗಿಸಿದ ಅಣುಬಾಂಬ್​ಗಿಂತ 500 ಪಟ್ಟು ಹೆಚ್ಚು ತೀವ್ರತೆ ಹೊಂದಿರಲಿದೆ ಎಂದು ನಾಸಾ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net