ಡಿಸೆಂಬರ್‌ನೊಳಗೆ ಸಹಾಯಕ ಪ್ರಾಧ್ಯಾಪಕ ನೇಮಕಾತಿ ಪ್ರಕ್ರಿಯೆ ಪೂರ್ಣ; ಸಚಿವ ಡಾ. ಸುಧಾಕರ್ ಭರವಸೆ

dr. m.c. sudhakara
Published on

ಬೆಂಗಳೂರು ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪ್ರಕ್ರಿಯೆಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಿದ್ದು, ಈ ಸಂಬಂಧ ತುರ್ತು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿರುವುದಾಗಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ತಿಳಿಸಿದರು.

ತಮ್ಮ ನಿವಾಸದಲ್ಲಿ ಮಂಗಳವಾರ ಭೇಟಿ ಮಾಡಿ ಶೀರ್ಘ ನೇಮಕಾತಿ ಪತ್ರ ನೀಡುವಂತೆ ಮನವಿ ಮಾಡಿದ ಸಹಾಯಕ ಪ್ರಾಧ್ಯಾಪಕ ಹುದ್ದೆ ಆಕಾಂಕ್ಷಿಗಳೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾಗಿರುವ 1,208 ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆಗೆ ಅಧಿಕಾರಿ ವರ್ಗದಿಂದ ಯಾವುದೇ ಅಡಚಣೆಯಾಗುವುದಿಲ್ಲ ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿಗಳ ಸಹಕಾರದಿಂದ ಕೈಗೊಂಡ ಕ್ರಮದಿಂದಾಗಿ ಈ ಮೊದಲು ಉಂಟಾಗಿದ್ದ ಎಲ್ಲ ಸಮಸ್ಯೆಗಳು ಪರಿಹಾರಗೊಂಡಿವೆ. ಇದರಿಂದ ನೂರಾರು ಕುಟುಂಬಗಳ ಬದುಕು ಹಸನಾಗಲಿದೆ.

ಇನ್ನು ಕೆಲವೇ ದಿನಗಳಲ್ಲಿ ನೇಮಕ ಮಾಡಲಾಗುತ್ತದೆ ಎಂದು ಹೇಳಿದರು.

ವಯಸ್ಸಾದ ತಂದೆ, ತಾಯಿ ,ಆರೋಗ್ಯ, ಕುಟುಂಬದ ಸಮಸ್ಯೆಗಳನ್ನು ಹೇಳಿಕೊಂಡು ಗ್ರಾಮೀಣ ಭಾಗದ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುವುದನ್ನು ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ ಎಂದರು.

ಮೂರು ವರ್ಷದಿಂದ ಸಾಕಷ್ಟು ಅಲೆದಾಡಿದ್ದೀರಿ, ಕಷ್ಟಪಟ್ಟಿದ್ದೀರಿ ಈಗ ಒಳ್ಳೆಯ ದಿನಗಳು ಬರುತ್ತಿದೆ, ಸಮರ್ಥವಾಗಿ ಬಳಸಿಕೊಂಡು ಶಿಕ್ಷಣ ಕ್ಷೇತ್ರಕ್ಕೆ ನಿಮ್ಮ ಕೊಡುಗೆ ನೀಡಿ ಎಂದು ಕರೆ ನೀಡಿದರು. ಸಿಂಧುತ್ವ, ಪೊಲೀಸ್ ಪರಿಶೀಲನೆ, ವೈದ್ಯಕೀಯ ಪರಿಶೀಲನೆ ಎಲ್ಲವನ್ನೂ ತುರ್ತಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪರಿಶೀಲನೆ ಮುಗಿದ ತಕ್ಷಣ ಆಯಾ ಅಭ್ಯರ್ಥಿಗಳಿಗೆ ಹುದ್ದೆ ನಿರ್ವಹಿಸಲು ತಕ್ಷಣ ಅವಕಾಶ ಮಾಡಿಕೊಡಲಾಗುತ್ತದೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net