ನೇಮಕಾತಿ ಆದೇಶ ಪ್ರತಿಗೆ ಸಹಾಯಕ ಪ್ರಾಧ್ಯಾಪಕ ಅಭ್ಯರ್ಥಿಗಳ ಆಗ್ರಹ

Assistant professor protest
Published on

ಬೆಂಗಳೂರು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಆಯ್ಕೆಯಾಗಿರುವ ಅಭ್ಯರ್ಥಿಗಳು ನೇಮಕಾತಿ ಆದೇಶ ನೀಡುವಂತೆ ಒತ್ತಾಯಿಸಿ ಸೋಮವಾರ ಶೇಷಾದ್ರಿ ರಸ್ತೆಯಲ್ಲಿರುವ ಕಾಲೇಜು ಶಿಕ್ಷಣ ಇಲಾಖೆ ಕಚೇರಿಯ ಮುಂದೆ ಪತ್ರಿಭಟನೆ ನಡೆಸಿದರು.

1,242 ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ನಡೆಸಿ ಸಾಕಷ್ಟು ವರ್ಷಗಳೇ ಕಳೆದಿವೆ. ಅಂತಿಮ ಆಯ್ಕೆ ಪಟ್ಟಿಯನ್ನು ಕೆಇಎ ಬಿಡುಗಡೆ ಮಾಡಿದೆ. ಕೆಲವರ ಮೀಸಲಾತಿ ವಿಚಾರವಾಗಿ ಆಯ್ಕೆಯಾದ ಸಾವಿರಾರು ಅಭ್ಯರ್ಥಿಗಳು ಕೆಲಸವಿಲ್ಲದೇ ನೇಮಕಾತಿ ಆದೇಶವನ್ನೇ ಎದುರು ನೋಡುವ ಸ್ಥಿತಿ ಸೃಷ್ಟಿಯಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಎಂಬ ಕಾರಣಕ್ಕೆ ನಮಗೆ ಬೇರೆ ಕಾಲೇಜುಗಳಲ್ಲಿ ಉದ್ಯೋಗ ಸಹ ನೀಡುತ್ತಿಲ್ಲ. ಇದರಿಂದ ನಿರುದ್ಯೋಗಿಗಳಾಗಿದ್ದೇವೆ. ಸಂಸಾರ ನಡೆಸುವುದು ಕಷ್ಟವಾಗಿದೆ. ಯಾವುದೇ ಸರ್ಕಾರ ಬಂದರೂ ನಮ್ಮ ಗೋಳು ಕೇಳುತ್ತಿಲ್ಲ. ನೇಮಕಾತಿ ಆದೇಶ ಇಲ್ಲದೆ, ಬದುಕು ಅತಂತ್ರವಾಗಿದೆ. ಎಷ್ಟು ಬಾರಿ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಅಭ್ಯರ್ಥಿಗಳು ಬೇಸರ ವ್ಯಕ್ತಪಡಿಸಿದರು.

ಪ್ರತಿಭಟನಾ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯ ರಾಮೋಜಿಗೌಡ ಮತ್ತು ಪುಟ್ಟಣ್ಣ ಭೇಟಿ ನೀಡಿ ಅಭ್ಯರ್ಥಿಗಳ ಸಮಸ್ಯೆ ಆಲಿಸಿದರು. ಸರ್ಕಾರಕ್ಕೆ ಇಚ್ಛಾಶಕ್ತಿಯ ಕೊರತೆ ಇದೆ. ಇಲ್ಲವಾದರೆ, ನೇಮಕಾತಿ ಆದೇಶ ನೀಡುವುದಕ್ಕೆ ಇಷ್ಟು ವರ್ಷ ಬೇಕಾಗಿರಲಿಲ್ಲ. ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಬೇಗ ಇತ್ಯರ್ಥಗೊಳಿಸಲು ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆಸುತ್ತೇವೆ ಎಂದು ಭರವಸೆ ನೀಡಿದರು. ಆದರೆ, ಭರವಸೆ ಬಗ್ಗದ ಅಭ್ಯರ್ಥಿಗಳು ನೇಮಕಾತಿ ಆದೇಶ ನೀಡುವವರೆಗೂ ಪ್ರತಿಭಟಿಸುವುದಾಗಿ ತಿಳಿಸಿದ್ದಾರೆ. ಕಾಲೇಜು ಶಿಕ್ಷಣ ಇಲಾಖೆ ಆವರಣದಲ್ಲೇ ಪ್ರತಿಭಟನೆ ನಡೆಸಿದರೂ, ಇಲಾಖೆಯ ಆಯುಕ್ತರು ಆಗಮಿಸಿದೇ ಉದಾಸೀನತೆ ತೋರಿರುವ ವಿರುದ್ಧ ಅಭ್ಯರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net