ಸೌಲಭ್ಯ ವಂಚಿತರಿಗೆ ನೆರವು: ಡಿ.ಕೆ.ಸುರೇಶ್ | Caste census justified

D K Suresh
Published on

ಬೆಂಗಳೂರು: ಮೀಸಲಾತಿ ಹಾಗೂ ಎಲ್ಲಾ ಸೌಲಭ್ಯಗಳು ಕೇವಲ ಸಿಕ್ಕವರಿಗೇ ಸಿಗಬಾರದು. ಇದನ್ನು ಎಲ್ಲರಿಗೂ ದೊರೆಯುವಂತೆ ಮಾಡಲು ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಬಹಳ ಪ್ರಮುಖ ಪಾತ್ರವಹಿಸುತ್ತದೆ” ಎಂದು ಬಮುಲ್ ಅಧ್ಯಕ್ಷ, ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.

ಸದಾಶಿವನಗರದ ನಿವಾಸದಲ್ಲಿ ಸೋಮವಾರ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಾತಿ ಸಮೀಕ್ಷೆ ಗೊಂದಲದಿಂದ ಕೂಡಿದೆ ಎನ್ನುವ ಆರೋಪಗಳ ಬಗ್ಗೆ ಕೇಳಿದಾಗ, “ನಾವು ಗಮನಿಸುತ್ತಿರುವುದು ಸೌಲಭ್ಯ ಇಲ್ಲದವರ ಸ್ಥಿತಿಗತಿಯನ್ನು ಮಾತ್ರ. ಇವುಗಳನ್ನು ಸಂಗ್ರಹಿಸಿ ಅವರನ್ನು ಮೇಲಕ್ಕೆತ್ತಲು ಯಾವ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತರಬೇಕು ಎಂಬುದಾಗಿ ಆಲೋಚನೆ ಮಾಡಲಾಗುತ್ತದೆ.

ಸಮೀಕ್ಷೆಯಿಂದ ಎಲ್ಲರಿಗೂ ಒಳ್ಳೆಯದಾಗಲಿದೆ. ಗ್ರಾಮೀಣ ಹಾಗೂ ನಗರ ಭಾಗದ ಜನರು ಇದರಲ್ಲಿ ಭಾಗವಹಿಸಿ ಮಾಹಿತಿ ನೀಡಬೇಕು. ಸಮೀಕ್ಷೆಯಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಗೊಂದಲ ಮಾಡುತ್ತಿದ್ದಾರೆ. ಇದು ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾತ್ರ” ಎಂದು ಸ್ಪಷ್ಟಪಡಿಸಿದರು.

ಸಮೀಕ್ಷೆಯಲ್ಲಿ ಮಾಹಿತಿ ನೀಡುವುದು ಕಡ್ಡಾಯವಲ್ಲ ಎಂದು ಆಯೋಗ ಹೇಳಿರುವ ಬಗ್ಗೆ ಕೇಳಿದಾಗ, “ಆಯೋಗ ಕೇಳಿರುವ ಎಲ್ಲಾ ಮಾಹಿತಿಗಳಿಗೆ ಉತ್ತರಿಸಬೇಕು ಎನ್ನುವುದು ಕಡ್ಡಾಯವಲ್ಲ. ಒಟ್ಟು 60 ಪ್ರಶ್ನೆಗಳನ್ನು ಕೇಳಲಾಗಿದೆ. ಅದರಲ್ಲಿ ಸಮಂಜಸವಲ್ಲದ ಪ್ರಶ್ನೆಗಳಿಗೆ ಉತ್ತರಿಸಬಹುದು, ಇರದೆಯೂ ಇರಬಹುದು ಎಂದು ಹೇಳಲಾಗಿದೆ ಎಂದರು.

ಸಂಬಳ, ಒಡವೆಗಳ ಮಾಹಿತಿ ಬಗ್ಗೆ ಕೇಳಲಾಗಿದೆ ಎಂದಾಗ, “ಬಡವರೋ ಅಥವಾ ಬಲ್ಲಿದರೋ ಎಂದು ತಿಳಿಯಲು ಈ ರೀತಿ ಮಾಡಲಾಗಿದೆ. ಚಿನ್ನ ಎಂಬುದು ಬಡವರಿಗೆ ಕನಸಿನ ಮಾತು. ಚಿನ್ನ ಇಟ್ಟಿರುವವರು ಇದರ ಬಗ್ಗೆ ಯೋಚನೆ ಮಾಡುತ್ತಿದ್ದಾರೆ ಹೊರತು. ಇಲ್ಲದವರು ಸುಮ್ಮನೆ ಇದ್ದಾರೆ.” ಎಂದರು.

ಹಿಂದು ಜಾತಿ ಎಂದೇ ಕರೆ ನೀಡಲಿ

ಗ್ಯಾರಂಟಿ ಯೋಜನೆಗಳನ್ನು ತೆಗೆದುಹಾಕಲು ಸಮೀಕ್ಷೆ ಮಾಡಲಾಗುತ್ತಿದೆ ಎನ್ನುವ ಅಶೋಕ್ ಅವರ ಆರೋಪದ ಬಗ್ಗೆ ಕೇಳಿದಾಗ, “ಕೇಂದ್ರ ಸರ್ಕಾರವೂ ಜಾತಿಗಣತಿ ನಡೆಸುತ್ತೇವೆ ಎಂದು ಕರೆ ನೀಡಿದೆ. ಸಿ.ಟಿ.ರವಿ, ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ನಾವು ಹಿಂದೂ ಜಾತಿಗೆ ಸೇರಿದವರು ಎಂದು ಅವರ ಕಾರ್ಯಕರ್ತರಿಗೆ ಕರೆ ನೀಡಲಿ.

ಎಲ್ಲ ಜಾತಿ, ಧರ್ಮದವರನ್ನು ಸಮಾನವಾಗಿ ತೆಗೆದುಕೊಂಡು ಹೋಗುತ್ತಾರೆ ಎಂದಾದರೆ ʼಹಿಂದುʼ ಎಂದೇ ಬರೆಸಲು ಅಭಿಯಾನ ನಡೆಸಲಿ, ಒತ್ತಾಯ ಮಾಡಲಿ” ಎಂದು ಡಿ.ಕೆ.ಸುರೇಶ್ ಸವಾಲು ಹಾಕಿದರು.

“ಜಾತಿ,ಧರ್ಮ ಒಡೆಯಲಾಗುತ್ತಿದೆ ಎಂದು ಪದೇ, ಪದೇ ಆರೋಪ ಮಾಡುತ್ತಿದ್ದಾರಲ್ಲವೇ? ಹಾಗಾದರೆ ನಾವು ಭಾರತೀಯರು, ಹಿಂದುಗಳು ಮಾತ್ರ ಎಂದು ಹೇಳಲಿ. ಸಮೀಕ್ಷೆಯನ್ನು ವಿರೋಧ ಮಾಡುತ್ತಿರುವವರು ಹಳ್ಳಿ, ಹಳ್ಳಿಗೆ ಹೋಗಿ ಈ ಅಭಿಯಾನ ನಡೆಸಲಿ” ಎಂದರು.

ಸಮೀಕ್ಷೆ ನಿಧಾನವಾಗುತ್ತಿರುವ ಕಾರಣಕ್ಕೆ ಮುಂದೂಡಿ ಎನ್ನುವ ಲಿಂಗಾಯತ, ಒಕ್ಕಲಿಗ ಸಮುದಾಯದ ಆಗ್ರಹದ ಬಗ್ಗೆ ಕೇಳಿದಾಗ, “ಮೊಬೈಲ್ ಅಪ್ಲಿಕೇಶನ್ ಮೂಲಕ ಸಮೀಕ್ಷೆ ನಡೆಸಲಾಗುತ್ತಿದೆ. ಈಗ ಅದಕ್ಕೆ ಹೊಂದಿಕೊಳ್ಳಲಾಗುತ್ತಿದೆ. ಸಮೀಕ್ಷೆಯೂ ಅನೇಕ ಕಡೆ ಈಗ ವೇಗ ಪಡೆದುಕೊಂಡಿದೆ. ಗ್ರಾಮೀಣ ಭಾಗದಲ್ಲಿ ಬೇಗ ಮುಗಿಯುತ್ತದೆ. ಆದರೆ ನಗರ ಭಾಗದಲ್ಲಿ ಸ್ವಲ್ಪ ಕಾಲಾವಕಾಶ ಬೇಕಾಗಬಹುದು. ಇದರ ಬಗ್ಗೆ ಸರ್ಕಾರ ಅಥವಾ ಆಯೋಗ ತೀರ್ಮಾನ ಮಾಡುತ್ತದೆ” ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net