

ಬೆಂಗಳೂರು: ಕರೊನಾ ಲಾಕ್ಡೌನ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿರುವ ಕಲಾವಿದರಿಗೆ ನೆರವಾಗಲು ಸರ್ಕಾರ ನಿರ್ಧರಿಸಿದೆ. ಸೋಮವಾರ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ನೇತೃತ್ವದ ನಿಯೋಗ, ಕಲಾವಿದರ ಸಂಕಷ್ಟದ ಬಗ್ಗೆ ವಿವರಣೆ ನೀಡಿತು.
ಜನಪದ ಸೇರಿ ವಿವಿಧ ಪ್ರಕಾರದ ಸರಿಸುಮಾರು 16 ಸಾವಿರ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದು ಆರ್ಥಿಕ ನೆರವು ನಿರೀಕ್ಷಿಸಿದ್ದು, ಇವರ ಪೈಕಿ 6 ಸಾವಿರ ಮಂದಿ ವಿವಿಧ ರೂಪದ ಮಾಸಾಶನ ಪಡೆಯುತ್ತಿದ್ದಾರೆ. ಉಳಿದ 10 ಸಾವಿರ ಮಂದಿಗೆ ನೆರವು ನೀಡಲು 2 ಕೋಟಿ ರೂ. ನೀಡಲು ಸಿಎಂ ನಿರ್ಧರಿಸಿದರು.
ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಟಿ.ಎಸ್.ನಾಗಾಭರಣ, ಆರ್ಥಿಕ ಸಂಕಷ್ಟದಲ್ಲಿರುವ 10 ಸಾವಿರ ಕಲಾವಿದರಿಗೆ ತಕ್ಷಣ ಆರ್ಥಿಕ ನೆರವು ನೀಡಲು ಸಿಎಂ ತೀರ್ವನಿಸಿದ್ದಾರೆ. ನಮ್ಮ ಕೋರಿಕೆ ಮಾನ್ಯ ಮಾಡಿದ್ದಕ್ಕೆ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಇನ್ನೆರೆಡು ದಿನಗಳಲ್ಲಿ ಮಾರ್ಗಸೂಚಿ ಹೊರಡಲಿದ್ದು, ಬಳಿಕ ನೆರವು ಅಪೇಕ್ಷಿಸಿ ಈಗಾಗಲೇ ಅರ್ಜಿ ಸಲ್ಲಿಸಿದ ಕಲಾವಿದರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗುತ್ತದೆ ಎಂದು ನಿಯೋಗದಲ್ಲಿದ್ದವರು ತಿಳಿಸಿದರು.