

ಬೆಂಗಳೂರು: ಕೇಂದ್ರ ಸರ್ಕಾರ ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗ (ಸಿಸಿಎಪಿ) ರಚಿಸಿದೆ. ಅದೇ ಮಾದರಿಯಲ್ಲಿ ಕಾರ್ಖಾನೆ ವಸ್ತುಗಳ ವೆಚ್ಚ ಮತ್ತು ಬೆಲೆ ಆಯೋಗ ರಚಿಸುವ ಅಗತ್ಯವಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಪ್ರತಿಪಾದಿಸಿದರು.
ಗಾಂಧಿ ಭವನದಲ್ಲಿ ಅಖಂಡ ಕರ್ನಾಟಕ ರೈತ ಸಂಘ ಆಯೋಜಿಸಿದ್ದ 45ನೇ ರೈತ ಹುತಾತ್ಮ ದಿನಾಚರಣೆ, ಸಂಘದ ಸಂಸ್ಥಾಪಕರು ಹಾಗೂ ಹೋರಾಟಗಾರರ ಸ್ಮರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಕ್ರಮದಿಂದ ಕಾರ್ಖಾನೆ ಉತ್ಪನ್ನಗಳ ವೆಚ್ಚ, ಬೆಲೆ ನಿಗದಿಯಲ್ಲಿ ಪಾರದರ್ಶಕತೆ ತರಬಹುದಾಗಿದ್ದು, ಒಟ್ಟಾರೆ ರೈತರು ಹಾಗೂ ಗ್ರಾಹಕರ ಕೇಂದ್ರಿತ ವ್ಯವಸ್ಥೆ ಜಾರಿಯಾಗಲಿದೆ. ರೈತರು ಹಾಗೂ ಗ್ರಾಹಕರಿಗೆ ಅನುಕೂಲವಾಗಲಿದೆ ಎಂದರು.
ವಸ್ತುಗಳ ಗರಿಷ್ಠ ಚಿಲ್ಲರೆ ದರ (ಎಂಆರ್‌ಪಿ) ತೆಗೆದು ಹಾಕಬೇಕಾಗಿದೆ. ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ವಸ್ತುಗಳ ಎಂಆರ್‌ಪಿಯಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ನಿಧಿ ಖರೆ ಇತ್ತೀಚೆಗೆ ಹೇಳಿದ್ದನ್ನು ಹನುಮನಗೌಡ ಬೆಳಗುರ್ಕಿ ಉಲ್ಲೇಖಿಸಿದರು.
ದೇಶದಲ್ಲಿ ಎಂಆರ್‌ಪಿ ನಿಯಂತ್ರಣ ವ್ಯವಸ್ಥೆ ಕುಸಿತದಿಂದ ಏಕರೂಪ ಗರಿಷ್ಠ ಚಿಲ್ಲರೆ ದರ ನಿಗದಿ ಸಾಧ್ಯವಾಗಿಲ್ಲ. ನಿಯಂತ್ರಣ ವ್ಯವಸ್ಥೆ ಸರಿದಾರಿಗೆ ತರಲು ಕಾರ್ಖಾನೆ ವಸ್ತುಗಳ ವೆಚ್ಚ ಮತ್ತು ಬೆಲೆ ಆಯೋಗ ರಚನೆ ಸಕಾಲವಾಗಿದೆ ಎಂದರು.
ಸುಸ್ಥಿರ ಕೃಷಿ, ಪ್ರಗತಿ ಸಾಧಿಸುವ ದೃಷ್ಟಿಯಿಂದ ದ್ವಿತೀಯ ಕೃಷಿ (ಸೆಕೆಂಡರಿ ಅಗ್ರಿಕಲ್ಚರ್)ಗೆ ರೈತರು ಹೆಚ್ಚಿನ ಆದ್ಯತೆ ನೀಡಬೇಕು ಎಂದು ರಾಜ್ಯ ಕೃಷಿ ಬೆಲೆ ಆಯೋಗದ ಅಧ್ಯಕ್ಷ, ನಿವೃತ್ತ ಐಎಎಸ್ ಅಧಿಕಾರಿ ಅಶೋಕ್ ದಳವಾಯಿ ಸಲಹೆ ನೀಡಿದರು.
ಕಾರ್ಯಾನುಭವದಿಂದ ಕೃಷಿಯಲ್ಲಿ ರೈತರ ಗಳಿಸಿಕೊಂಡ ಜ್ಞಾನಕ್ಕೆ ಮಾರಾಟದ ಕೌಶಲ ಸ್ಪರ್ಶ ನೀಡುವುದು ಮುಖ್ಯವಾಗಿದೆ. ಕೃಷಿ, ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ಉಪ ಉತ್ಪನ್ನಗಳ ತಯಾರಿಕೆಯೇ ದ್ವಿತೀಯ ಕೃಷಿಯಾಗಿದೆ.
ಸೆಕೆಂಡರಿ ಕೃಷಿಗೆ ಕೇಂದ್ರ, ರಾಜ್ಯ ಸರ್ಕಾರಗಳು ಸಾಕಷ್ಟು ಉತ್ತೇಜನ ನೀಡುತ್ತವೆ. ರೈತ ಉತ್ಪಾದಕ ಸಂಸ್ಥೆಗಳ ನೆರವು ಪಡೆಯಬಹುದಾಗಿದೆ. ಸೆಕೆಂಡರಿ ಕೃಷಿಯನ್ನು ಕರಗತ ಮಾಡಿಕೊಂಡರೆ ಕೃಷಿ ಲಾಭದಾಯಕವಾಗುವುದು ನಿಶ್ಚಿತವೆಂದರು.
ಉದ್ಯಮ-ವಹಿವಾಟುದಾರರು ಮಾರುಕಟ್ಟೆ ಜಾಡು ಹಿಡಿದು ಮುನ್ನಡೆಯುತ್ತಾರೆ. ಆ ಮೂಲಕ ಲಾಭಾಂಶ ಖಾತರಿ ಜತೆಗೆ ಹೆಚ್ಚಿಸಿಕೊಳ್ಳಲು ಗಮನ ನೀಡುತ್ತಾರೆ. ಅದೇ ರೀತಿ ರೈತರು ಮಾರುಕಟ್ಟೆ ಶೋಧಿಸಿ ಸ್ಪರ್ಧಾತ್ಮಕ ದರದಲ್ಲಿ ಉತ್ಪನ್ನಗಳ ಮಾರಾಟದ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಅಶೋಕ್ ದಳವಾಯಿ ಹೇಳಿದರು.
ರೈತರು ಉದ್ಯಮಿಯಾಗಬೇಕು ಎಂದು ಕೃಷಿ ತಾಂತ್ರಿಕ ವಿಜ್ಞಾನಿ ಎ.ಬಿ.ಪಾಟೀಲ ಸಲಹೆ ನೀಡಿದರೆ, ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವ ಅಗತ್ಯವಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಹೇಳಿದರು.
ನಂತರ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರೊಂದಿಗೆ ಸಂಘಟನೆ, ಸಂವಾದ, ಮುಂದಿನ ಚಟುವಟಿಕೆಗಳ ರೂಪರೇಷೆ ಕುರಿತು ಚರ್ಚೆಯಾಯಿತು. ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ವಾಲಿ, ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಮುಖಂಡರಾದ ಅನುಸೂಯಮ್ಮ, ಸುನಂದಮ್ಮ, ಚುಕ್ಕಿ ನಂಜುಂಡಸ್ವಾಮಿ, ಕೆ.ಟಿ.ಗಂಗಾಧರ ಇನ್ನಿತರರು ಇದ್ದರು.