

ರಾಂಚಿ: 81 ಸದಸ್ಯಬಲದ ಜಾರ್ಖಂಡ್ ವಿಧಾನಸಬೆಗೆ (Jharkhand Assembly Election) ನವೆಂಬರ್ 13ರಂದು ಮೊದಲನೇ ಹಂತದ ಮತದಾನ ನಡೆದಿದ್ದು, ಉಳಿದ 38 ಸ್ಥಾನಗಳಿಗೆ ನವೆಂಬರ್ 20ರಂದು ಮತದಾನ ನಡೆಯಲಿದೆ. ಎರಡನೇ ಹಂತದ ಮತದಾನಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರು ಬಿರುಸಿನ ಪ್ರಚಾರ ನಡೆಸುತ್ತಿದ್ದು, ಹಾದಿಯಾಗಿ ವಿವಾದಾತ್ಮಕ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದರಲ್ಲಿ ಪ್ರಮುಖವಾಗಿ ಕಾಂಗ್ರೆಸ್ ನಾಯಕರು ಮುಂಚೂಣಿಯಲ್ಲಿದ್ದು, ಇದೀಗ ಜಮ್ಮು-ಕಾಶ್ಮೀರ ವಿಧಾನಸಭೆಯ ಶಾಸಕರೊಬ್ಬರು ಜಾರ್ಖಂಡ್ ಚುನಾವಣಾ ಪ್ರಚಾರದ ವೇಳೆ ನೀಡಿರುವ ಹೇಳಿಕೆ ವಿವಾದಕ್ಕೆ ಆಸ್ಪದ ಮಾಡಿಕೊಟ್ಟಿದ್ದು, ಸಖತ್ ವೈರಲ್ ಆಗುತ್ತಿದೆ.
ಬಿಜೆಪಿಯೂ ಈ ಬಾರಿ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಬಾಂಗ್ಲಾ ನುಸುಳುಕೋರರ ವಿಚಾರವನ್ನು ಮುಂದಿಟ್ಟುಕೊಂಡು ಆಡಳಿತರೂಢ ಜೆಜೆಎಂ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ಚಾಟಿ ಬೀಸುತ್ತಿರುವ ನಡುವೆಯೇ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಗುಲಾಮ್ ಅಹ್ಮದ್ ಮಿರ್ ಈ ಹೇಳಿಕೆ ನೀಡಿದ್ದು, ಕಾಂಗ್ರೆಸ್ಗೆ ಮಗ್ಗಲ ಮುಳ್ಳಾಗಿ ಪರಿಣಮಿಸಿದ್ದು, ಇದು ಚುನಾವಣೆಯ ಮೇಲೆ ಪರಿಣಾಮ ಬೀರುವುದು ಪಕ್ಕಾ ಎಂದು ಹೇಳಲಾಗಿದೆ.
ಬೆರ್ಮೊ ವಿಧಾನಸಭಾ ಕ್ಷೇತ್ರದ ಚಂದ್ರಾಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಗುಲಾಮ್ ಅಹ್ಮದ್ ಮಿರ್, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಎಲ್ಲ ನಾಗರಿಕರಿಗೆ ₹450ಕ್ಕೆ ಅಡುಗೆ ಅನಿಲ ಸಿಲಿಂಡರ್ ನೀಡಲಾಗುವುದು. ಅವರು ನುಸುಳುಕೋರರು ಆಗಿರಲಿ, ಅಲ್ಲದೇ ಇರಲಿ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ರಚನೆಯಾದರೆ ಡಿಸೆಂಬರ್ 1ರಿಂದ ₹450ಕ್ಕೆ ಅಡುಗೆ ಅನಿಲ ಸಿಲಿಂಡರ್ ನೀಡುವುದಾಗಿ ಭರವಸೆ ನೀಡಿದ್ದೇವೆ. ಜನಸಾಮಾನ್ಯರಿಗಾಗಿ ಈ ಯೋಜನೆ ಜಾರಿಯಾಗಲಿದೆ. ಅವರು ಹಿಂದೂಗಳು, ಮುಸ್ಲಿಮರು, ನುಸುಳುಕೋರರೇ ಆಗಿರಲಿ - ಜಾರ್ಖಂಡ್‌ನ ಎಲ್ಲ ನಾಗರಿಕರಿಗೂ ಇದು ಅನ್ವಯವಾಗಲಿದೆ ಎಂದು ಚುನಾವಣಾ ಪ್ರಚಾರ ಸಭೆಯಲ್ಲಿ ಹೇಳಿದ್ದಾರೆ.
ಇತ್ತ ಮಿರ್ ನೀಡಿರುವ ಹೇಳಿಕೆ ವೈರಲ್ ಆಗುತ್ತಿದ್ದಂತೆ ಬಿಜೆಪಿ ಕಿಡಿಕಾರಿದ್ದು, ಹಿಂದೂಗಳು ಮುಸ್ಲಿಮರು ಮತ್ತು ನುಸುಳುಕೋರರಿಗೆ ಕಡಿಮೆ ದರದಲ್ಲಿ ಎಲ್‌ಪಿಜಿ ಸಿಲಿಂಡರ್ ನೀಡುತ್ತೇವೆ ಎಂದು ಕಾಂಗ್ರೆಸ್‌ನ ಉಸ್ತುವಾರಿ ಭರವಸೆ ನೀಡಿದ್ದಾರೆ. ಬುಡಕಟ್ಟು ಜನರ ಹಕ್ಕು ಕಸಿದು ನುಸುಳುಕೋರರಿಗೆ ನೀಡುವುದಕ್ಕೆ ಬಿಜೆಪಿ ಬಿಡುವುದಿಲ್ಲ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ.