

ಬೆಂಗಳೂರು: ಗೃಹಸಚಿವರ ಕಠಿಣ ಕ್ರಮದ ಎಚ್ಚರಿಕೆಯ ನಡುವೆಯೂ ರಾಜಧಾನಿ ಬೆಂಗಳೂರಿನಲ್ಲಿ ಪುಡಿರೌಡಿಯ ಪುಂಡಾಟ ಮುಂದುವರಿದಿದ್ದು, ಸಣ್ಣಪುಟ್ಟ ಬೇಕರಿ-ಕಾಂಡಿಮೆಂಟ್ಸ್-ಹೋಟೆಲ್ಗಳನ್ನು ನಡೆಸುವವರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.
ಕೆಲವು ದಿನಗಳ ಹಿಂದಷ್ಟೇ ಬೇಕರಿಯೊಂದರ ಮಾಲೀಕರ ಮೇಲೆ ಹಲ್ಲೆ ನಡೆದಿದ್ದು, ಇದೀಗ ಕಾಂಡಿಮೆಂಟ್ಸ್ ಸ್ಟೋರ್ ನಡೆಸುತ್ತಿದ್ದವರ ಮೇಲೆ ಹಲ್ಲೆ ನಡೆದಿದೆ. ಯಲಹಂಕ ನ್ಯೂಟೌನ್ನ ಬ್ರಹ್ಮಲಿಂಗೇಶ್ವರ ಕಾಂಡಿಮೆಂಟ್ಸ್ನಲ್ಲಿ ಈ ಘಟನೆ ನಡೆದಿದೆ. ಯಲಹಂಕ ನ್ಯೂಟೌನ್ ನಿವಾಸಿ ಗಣೇಶ್ ಎಂಬಾತ ಈ ಕೃತ್ಯ ಎಸಗಿದ್ದಾನೆ.
ದಿನೇಶ್ ಎಂಬುವವರು ಬ್ರಹ್ಮಲಿಂಗೇಶ್ವರ ಕಾಂಡಿಮೆಂಟ್ಸ್ ಸ್ಟೋರ್ ನಡೆಸುತ್ತಿದ್ದು, ಸಿಗರೇಟ್ ಕೊಡಲು ತಡವಾಯಿತು ಎಂಬ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಮಾ. 14ರಂದು ಈ ಘಟನೆ ನಡೆದಿದ್ದು, ಈ ಕುರಿತ ವಿಡಿಯೋ ವೈರಲ್ ಆಗಿದೆ. ಗಣೇಶ್ನನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.