ಸಿಗರೇಟ್ ವಿಚಾರವಾಗಿ ಪರಿಚಿತನ ಮೇಲೆ ಹಲ್ಲೆ: 7 ಜನರ ಬಂಧನ

arrest
Published on

ಬೆಂಗಳೂರು: ಮದ್ಯದ ಅಮಲಿನಲ್ಲಿ ಸಿಗರೇಟ್ ವಿಚಾರಕ್ಕೆ ಕಿತ್ತಾಡಿಕೊಂಡು ಪರಿಚಿತನ ಮೇಲೆ ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದ 7 ಜನ ಆರೋಪಿಗಳನ್ನು ಕಾಡುಗೋಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇತ್ತೀಚೆಗೆ ಧನಂಜಯ್ ಎಂಬಾತನನ್ನು ಅರೆಬೆತ್ತಲೆಗೊಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದ ಆರೋಪದಡಿ ಮಂಜುನಾಥ್, ಸಂತೋಷ್, ಆಕಾಶ್, ಅಮರೇಶ್, ನವೀನ್, ವಿಶಾಲ್ ಜೋಷಿ, ಮತ್ತು ಸುರೇಂದ್ರನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರ ಮೂಲದ ಧನಂಜಯ್ ಹಾಗೂ ನೇಪಾಳ ಮೂಲದ ಹಾಗೂ ಸ್ಥಳೀಯ ನಿವಾಸಿಗಳಾದ ಆರೋಪಿಗಳು ಕಾಡುಗೋಡಿ ವ್ಯಾಪ್ತಿಯಲ್ಲಿರುವ ಹೋಟೆಲ್ವೊಂದರಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು. ಮೇ ೭ ರ ತಡರಾತ್ರಿ ಆರೋಪಿಗಳು ಪಾರ್ಟಿ ಮಾಡುತ್ತಿದ್ದರು. ಧನಂಜಯ್ ಕೂಡ ಮದ್ಯ ಸೇವಿಸಿದ್ದ. ಧನಂಜಯ್‌ಗೆ ಆರೋಪಿಗಳ ಪೈಕಿ ಒಬ್ಬಾತ ಪರಿಚಿತನಾಗಿದ್ದ ಹೀಗಾಗಿ ಅವರ ಬಳಿ ಸಿಗರೇಟ್ ಕೇಳಿದ್ದಾನೆ. ನಂತರ ಸಿಗರೇಟ್ ವಿಚಾರವಾಗಿ ಧನಂಜಯ್ ಹಾಗೂ ಆರೋಪಿಗಳ ನಡುವೆ ಗಲಾಟೆ ಆರಂಭವಾಗಿತ್ತು. ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ಮಾಡಿಕೊಂಡರು. ನಂತರ ಆರೋಪಿಗಳು ತಮ್ಮ ರೂಮ್‌ಗೆ ಹೋಗಿದ್ದಾರೆ. ಗಲಾಟೆಯಿಂದ ಆಕ್ರೋಶಗೊಂಡಿದ್ದ ಧನಂಜಯ್ ದೊಡ್ಡ ಕಲ್ಲನ್ನು ತೆಗೆದುಕೊಂಡು ಹೋಗಿ ಅವರ ರೂಮ್ ಬಾಗಿಲಿಗೆ ಹೊಡೆದಿದ್ದಾನೆ. ಇದರಿಂದ ಸಿಟ್ಟಿಗೆದ್ದ ಆರೋಪಿಗಳು ಧನಂಜಯ್ನನ್ನ ಅರಬೆತ್ತಲೆಗೊಳಿಸಿ ರಸ್ತೆಗೆ ಕರೆತಂದು ಕೈಗೆ ಸಿಕ್ಕ ದೊಣ್ಣೆ, ಕಲ್ಲು, ಬೆಲ್ಟ್, ಕ್ರೇಟ್‌ನಿಂದ ಹಲ್ಲೆ ಮಾಡಿದ್ದರು. ಆರೋಪಿಗಳು ಬಡಿದಾಡಿದ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋ ವೈರಲ್ ಆಗುತ್ತಿದಂತೆ ಎಚ್ಚೆತ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ಘಟನೆಯ ಕುರಿತು ಹೋಟೆಲ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಎ್ಐಆರ್ ದಾಖಲಿಸಿಕೊಂಡಿದ್ದ ಕಾಡುಗೋಡಿ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net