ಭಜನೆ ಹಾಡು ಹಾಕಿದಕ್ಕೆ ಹಲ್ಲೆ ಪ್ರಕರಣ: ಮತ್ತಿಬ್ಬರ ಬಂಧನ

arrest
Published on

ಬೆಂಗಳೂರು: ಅಜಾನ್ ಕೂಗುವ ಸಂದರ್ಭದಲ್ಲಿ ಹಿಂದಿ ಭಜನೆ ಹಾಡು ಹಾಕಿದ್ದಕ್ಕೆ ಮೊಬೈಲ್ ಅಂಗಡಿಗೆ ನುಗ್ಗಿ ಯುವಕನ ಮೇಲೆ ಹಲ್ಲೆ ಮಾಡಿದ್ದ ಪ್ರಕರಣಕ್ಕೆ ಸೇರಿದಂತೆ ಒರ್ವ ಅಪ್ರಾಪ್ತ ಸೇರಿ ಮತ್ತಿಬ್ಬರು ಆರೋಪಿಗಳನ್ನು ಹಲಸೂರುಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೇರಿದೆ.


ತರುಣ್(೨೪) ಅಲಿಯಾಸ್ ದಡಿಯಾ ಮತ್ತು ೧೭ ವರ್ಷದ ಅಪ್ರಾಪ್ತನನ್ನು ವಶಕ್ಕೆ ಪಡೆಯಲಾಗಿದೆ.
ಘಟನೆಯ ದಿನ ಸುಲೇಮಾನ್, ಶಹನವಾಜ್, ರೋಹಿತ್ ಮೂವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಮತ್ತೊಬ್ಬ ಆರೋಪಿ ತಲೆಮರೆಸಿಕೊಂಡಿದ್ದು ಶೀಘ್ರವೇ ಆತನನ್ನು ಪತ್ತೆ ಹಚ್ಚಿ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಆರೋಪಿ ಸುಲೇಮಾನ್ ಕಾರು ಚಾಲಕನಾಗಿದ್ದು, ಈ ಹಿಂದೆ ಕಿಡ್ನಾಪ್, ಸುಲಿಗೆ ಪ್ರಕರಣದಲ್ಲಿ ಬಂಧಿತನಾಗಿದ್ದ. ಶಹನವಾಜ್ ಖಾಸಗಿ ಆಸ್ಪತ್ರೆಯಲ್ಲಿ ವಾರ್ಡ್ ಬಾಯ್ ಆಗಿದ್ದಾನೆ. ರೋಹಿತ್ ಮೆಡಿಸನ್ ಡಿಸ್ಟ್ರಿಬ್ಯೂಟರ್ ಆಗಿ ಕೆಲಸ ಮಾಡಿಕೊಂಡಿದ್ದಾನೆ. ಇನ್ನು ತರುಣ್ ಯಾವುದೇ ಕೆಲಸ ಕಾರ್ಯಗಳಿಗೆ ಹೋಗದೆ ಬೀದಿ ಬೀದಿ ಸುತ್ತುತ್ತಿದ್ದ. ಬಂಧಿತರು ಹಲ್ಲೆಗೊಳಗಾದವನ ಅಂಗಡಿಗೆ ಈ ಹಿಂದೆ ಮೊಬೈಲ್‌ಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿ ಮಾಡಲು ಹೋಗುತ್ತಿದ್ದರು ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ನಗರತ್‌ಪೇಟೆಯಲ್ಲಿರುವ ಮೊಬೈಲ್ ಶಾಪ್‌ನಲ್ಲಿ ಭಾನುವಾರ ಸಂಜೆ ೬.೩೦ ರ ವೇಳೆ ಯುವಕ ಹಿಂದಿ ಭಾಷೆಯ ಹನುಮಂತನ ಭಜನೆ ಹಾಡುಗಳನ್ನು ಜೋರು ಸೌಂಡ್ ಇಟ್ಟು ಹಾಕಿದ್ದಾನೆ. ಈ ವೇಳೆ ಅಂಗಡಿಗೆ ಬಂದ ಆರು ಜನ ಯುವಕರು ಮಸೀದಿಯಲ್ಲಿ ಅಜಾನ್ ಕೂಗುವ ಸಮಯದಲ್ಲಿ ಜೋರು ಸೌಂಡ್ ಇಟ್ಟು ಹಾಡು ಹಾಕಬೇಡ ಎಂದಿದ್ದಾರೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ನಂತರ ಆರು ಜನ ಯುವಕರು ಅಂಗಡಿಯಲ್ಲಿದ್ದ ಯುವಕ ಮುಖೇಶ್ ಮೇಲೆ ಅಂಗಡಿಯಿಂದ ಹೊರಗೆ ಎಳೆದೊಯ್ದು ಹಲ್ಲೆ ಮಾಡಿದ್ದರು. ಈ ಸಂಬಂಧ ಐವರನ್ನು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚುನಾವಣಾ ಆಯೋಗಗಕ್ಕೆ ದೂರು:
ಕೆಪಿಸಿಸಿ ಕಾನೂನು ಘಟಕ ವತಿಯಿಂದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಲಾಗಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಶಾಸಕ ರವಿಸುಬ್ರಮಣ್ಯ ಅವರು ಮಾ.೧೮ ರಂದು ಸ್ಥಳಕ್ಕೆ ಭೇಟಿ ನೀಡಿದ್ದರು. ಅಂಗಡಿಯ ಮುಂದೆ ಸೋಮವಾರ ಗುಂಪು ಸೇರಿಸಿ ಮಧ್ಯಾಹ್ನ ೧೨ ಗಂಟೆಗೆ ಹನುಮಾನ್ ಚಾಲೀಸ್ ಪಠಣೆ ಮಾಡಲು ಕರೆ ನೀಡಿದ್ದಾರೆ. ಅಲ್ಲದೇ ಧಾರ್ಮಿಕ ಘೋಷಣೆಗಳನ್ನು ಕೂಗಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಚುನಾವಣಾ ಆಯೋಗದ ಪ್ರಕಾರ, ಚುನಾವಣೆಯ ಸಂದರ್ಭದಲ್ಲಿ ಕೋಮು, ಮತ, ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ಕೃತ್ಯವೆಸಗುವುದು ಅಪರಾಧ. ನೀತಿ ಸಂಹಿತೆ ಉಲ್ಲಂಘಿಸಿ ಪ್ರತಿಭಟನೆಗೆ ಕರೆ ನೀಡಲಾಗಿದೆ. ಹೀಗಾಗಿ ತೇಜಸ್ವಿ ಸೂರ್ಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.


ಇವತ್ತು ಜೈಲ್, ನಾಳೆ ಬೇಲ್ ಮತ್ತೆ ಅದೇ ಖೇಲ್:
ಬಂಧಿತರಲ್ಲಿ ಒಬ್ಬನ ಸಹೋದರ ಸ್ಟೇಟಸ್ ಪೋಸ್ಟ್ ಹಾಕಿಕೊಂಡು ಎಚ್ಚರಿಕೆಯನ್ನು ನೀಡಿದ್ದಾನೆ. ಆರೋಪಿಗಳ ಬಂಧನವಾದ ಬೆನ್ನಿಗೇ ಒಬ್ಬ ಆರೋಪಿಯ ಸೋದರ ಹಾಕಿರುವ ಪೋಸ್ಟ್ ಎಂಥವರನ್ನಾದರೂ ಕೆರಳಿಸುವಂತಿದೆ. ಇದರ ಅರ್ಥ ಹೀಗಿದೆ ಇವತ್ತು ಜೈಲ್, ನಾಳೆ ಬೇಲ್, ಮತ್ತೆ ಅದೇ ಖೇಲ್. ಅಂದರೆ ಇವತ್ತು ಜೈಲಾಗುತ್ತೆ, ನಾಳೆ ಬೇಲಾಗುತ್ತದೆ. ನಂತರ ಮತ್ತದೇ ಆಟ ಶುರು ಮಾಡ್ತೀವಿ ಎಂದು ಸ್ಟೇಟಸ್ ಹಾಕಿದ್ದಾನೆ.


ಗಲಾಟೆ ವಿಚಾರದಲ್ಲಿ ಇದುವರೆಗೂ ಐವರನ್ನು ಬಂಧಿಸಲಾಗಿದೆ. ಭಕ್ತಿ ಗೀತೆ ವಿಚಾರವಾಗಿ ಆರೋಪಿಗಳು ಗಲಾಟೆ ಮಾಡಿದ್ದಾರೆಂದು ದೂರು ನೀಡಿದ್ದರು. ಎ್ಐಆರ್ ದಾಖಲಿಸುವಲ್ಲಿ ವಿಳಂಬವಾಗಿಲ್ಲ. ತ್ವರಿತವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಕೊಲೆಯತ್ನದ ಆರೋಪದಡಿಯೇ ಎಫ್‌ಐಆರ್ ದಾಖಲಾಗಿದೆ. ದೂರು ದಾಖಲಾದ ದಿನ ಮೂವರನ್ನು ಬಂಧಿಸಲಾಗಿತ್ತು. ಸೋಮವಾರ ರಾತ್ರಿ ಮತ್ತೆ ಇಬ್ಬರ ಬಂಧನ ಮಾಡಲಾಗಿದೆ.
ಬಿ.ದಯಾನಂದ್, ನಗರ ಪೊಲೀಸ್ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net