

ಬೆಂಗಳೂರು: ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ನಡೆದಿದ್ದ ಮಾಯಾ ಗೊಗೋಯ್ (19) ಕೊಲೆ ಪ್ರಕರಣದ ಸಂಬಂಧ ಆರೋಪಿಯನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಆರವ್ ಹನೋಯ್ (21) ಬಂಧಿತ. ನ.23ರಂದು ಅಸ್ಸಾಂನ ಗುವಾಹಟಿ ಮೂಲದ ಮಾಯಾ ಗೊಗೋಯ್ (19) ಎಂಬಾಕೆಯನ್ನು ಕುತ್ತಿಗೆ ಬಿಗಿದು ಮತ್ತು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದ. ಆರೋಪಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ ಎಂದು ಪೂರ್ವ ವಿಭಾಗ ಡಿಸಿಪಿ ಡಿ. ದೇವರಾಜ್ ತಿಳಿಸಿದ್ದಾರೆ.
ನೌಕರಿ ಅರಸಿ ಬಂದಿದ್ದ ಮಾಯಾ, ಎಚ್‌ಎಸ್‌ಆರ್ ಲೇಔಟ್‌ನಲ್ಲಿನ ಖಾಸಗಿ ಕಂಪನಿಯಲ್ಲಿ ನೌಕರಿ ಮಾಡುತ್ತಿದ್ದಳು. ಓದು ಮುಗಿಸಿ ಇಂಟರ್‌ಶ್ಿ ಸಲುವಾಗಿ ಆರವ್, 8 ತಿಂಗಳ ಹಿಂದೆ ನಗರಕ್ಕೆ ಬಂದು ಇಂದಿರಾನಗರದಲ್ಲಿ ಖಾಸಗಿ ಕಂಪನಿಗೆ ಸೇರಿದ್ದ. ತಿಂಗಳಿಗೆ 15 ಸಾವಿರ ರೂ. ವೇತನ ಸಿಗುತ್ತಿತ್ತು. ಇದರ ನಡುವೆ 6 ತಿಂಗಳ ಹಿಂದೆ ಡೇಟಿಂಗ್ ಆ್ಯಪ್‌ನಲ್ಲಿ ಆರವ್ ಮತ್ತು ಮಾಯಾಗೂ ಪರಿಚಯವಾಗಿ ಚಾಟಿಂಗ್ ಶುರು ಮಾಡಿದ್ದರು. ಇಬ್ಬರ ನಡುವೆ ಸಲುಗೆ ಬೆಳೆದು ಕೊನೆಗೆ ನ.23ರಂದು ಇಂದಿರಾನಗರ 2ನೇ ಹಂತದಲ್ಲಿರುವ ದಿ ರಾಯಲ್ ಲಿವಿಂಗ್ ಅಪಾರ್ಟ್‌ಮೆಂಟ್‌ನಲ್ಲಿ ಸರ್ವಿಸ್ ್ಲ್ಯಾಟ್ ಪಡೆದು ಇಬ್ಬರು ಉಳಿದುಕೊಂಡಿದ್ದರು. ಈ ನಡುವೆ ಇಬ್ಬರ ನಡುವೆ ಖಾಸಗಿ ವಿಚಾರಕ್ಕೆ ಜಗಳವಾಗಿದೆ. ಕೊಲೆ ಮಾಡುವ ಉದ್ದೇಶಕ್ಕೆ ್ಲ್ಯಾಟ್‌ಗೆ ಆರವ್, ಆನ್‌ಲೈನ್‌ನಲ್ಲಿ ನೈಲನ್ ಹಗ್ಗ ಮತ್ತು ಚಾಕು ತರಿಸಿಕೊಂಡಿದ್ದಾನೆ. ಸಂಚುರೂಪಿಸಿ ಮಾಯಾ ಕತ್ತಿಗೆಯನ್ನು ಹಗ್ಗದಲ್ಲಿ ಬಿಗಿದು ಕೊಲೆಗೆ ಯತ್ನಿಸಿದ್ದಾನೆ. ಪ್ರಜ್ಞೆ ತಪ್ಪಿದಾಗ ಚಾಕುವಿನಿಂದ ಕತ್ತು ಕೊಯ್ದು, ಎದೆಯ ಭಾಗವನ್ನು ಬರ್ಬರವಾಗಿ ಇರಿದು ಕೊಲೆ ಮಾಡಿದ್ದಾನೆ. ಒಂದು ದಿನ ಶವದ ಜತೆಗೆ ಇದ್ದ ಆರೋಪಿ ಆರವ್, ನ.26ರ ಬೆಳಗ್ಗೆ 8.19ರಲ್ಲಿ ಕ್ಯಾಬ್ ಮಾಡಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಅನುಮಾನ ಬಂದು ಹೋಟೆಲ್ ಸಿಬ್ಬಂದಿ ರೂಮ್ ಗಮನಿಸಿದಾಗ ಯುವತಿ ಹತ್ಯೆ ಆಗಿರುವುದು ಬೆಳಕಿಗೆ ಬಂದಿತ್ತು. ವಿಷಯ ತಿಳಿದ ಇಂದಿರಾನಗರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಆರೋಪಿ ಪತ್ತೆಗೆ ಬಲೆಬೀಸಿದ್ದರು.
ಆರೋಪಿಯ ಪತ್ತೆಗೆ ಮೂರು ವಿಶೇಷ ತಂಡ ರಚನೆ ಮಾಡಿ ಕೇರಳ ಮತ್ತು ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ತಂಡ ರವಾನೆ ಆಗಿದ್ದವು. ಆರೋಪಿ ಆರವ್, ಮೊದಲು ರಾಯಚೂರಿಗೆ ತಲುಪಿ ಅಲ್ಲಿಂದ ಮಧ್ಯಪ್ರದೇಶಕ್ಕೆ ಹೋಗಿದ್ದ. ಅಲ್ಲಿಂದ ಉತ್ತರ ಪ್ರದೇಶಕ್ಕೆ ತಲುಪಿ ಮತ್ತೆ ವಾರಣಾಸಿಗೆ ಹೋಗಿದ್ದ. ಅಷ್ಟೊತ್ತಿಗೆ ಬೆಂಗಳೂರು ಪೊಲೀಸರು ತನ್ನ ಹುಡುಕಿಕೊಂಡು ಕೇರಳಕ್ಕೆ ಬಂದಿರುವ ವಿಷಯ ತಿಳಿದ ಆರೋಪಿ ಆರವ್, ವಿಧಿ ಇಲ್ಲದೆ ಇಂದಿರಾನಗರ ಪೊಲೀಸರಿಗೆ ದೂರವಾಣಿ ಕರೆ ಮಾಡಿ ಬೆಂಗಳೂರಿಗೆ ಬಂದು ಶರಣಾಗುವುದಾಗಿ ಭರವಸೆ ಕೊಟ್ಟಿದ್ದಾನೆ. ಅದರಂತೆ ವಾರಣಾಸಿಯಿಂದ ವಿಮಾನದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಅಲ್ಲಿಯೇ ಕಾದು ನಿಂತಿದ್ದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಕೋರ್ಟ್‌ಗೆ ಹಾಜರುಪಡಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.