Viral Photo: ಅಸ್ಸಾಂ ಮುಖ್ಯಮಂತ್ರಿಗೆ ನಕಲಿ ಲ್ಯಾಂಬೋರ್ಗಿನಿ ಕಾರು ಗಿಫ್ಟ್​ ನೀಡಿದ ಮೆಕ್ಯಾನಿಕ್!

Lamborghini
Published on

ಗುವಾಹಟಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ಖುಷಿಯಾಗಿದ್ದಾರೆ. ಕಾರಣ ಅವರಿಗೆ 31ರ ಹರೆಯದ ವ್ಯಕ್ತಿಯೊಬ್ಬ ಐಷಾರಾಮಿ ಲ್ಯಾಂಬೋರ್ಗಿನಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾನೆ!

ಅರ್ರೇ... ಮುಖ್ಯಮಂತ್ರಿಗೆ ಯುವಕನೊಬ್ಬ ಲ್ಯಾಂಬೋರ್ಗಿನಿ ಕಾರನ್ನು ಯಾಕೆ ನೀಡಿದ ಎಂಬ ಅನುಮಾನ ಮತ್ತು ಪ್ರಶ್ನೆ ಮೂಡುವುದು ಸಹಜ. ಆದರೆ ನಿಜ ಸಂಗತಿ ಬೇರೆಯೇ ಇದೆ. ಅಸಲಿಗೆ ಹಿಮಂತ್ ಬಿಸ್ವಾ ಶರ್ಮಾ ಅವರಿಗೆ ಉಡುಗೊರೆಯಾಗಿ ಲಭಿಸಿರುವುದು ಲ್ಯಾಂಬೋರ್ಗಿನಿ ಕಾರಲ್ಲ. ನೂರುಲ್ ಹಕ್ ಎಂಬಾತ ಮಾರುತಿ ಸುಝುಕಿ ಕಂಪೆನಿಯ ಸ್ವಿಫ್ಟ್​ ಕಾರು. ಆದರೆ ಸ್ವಿಫ್ಟ್​ ಕಾರನ್ನು ಲ್ಯಾಂಬೋರ್ಗಿನಿ ಕಾರಿನಂತೆ ಮರು ವಿನ್ಯಾಸಗೊಳಿಸಿದ್ದಾನೆ. ವಿನ್ಯಾಸಗೊಂಡಿರುವ ಈ ಕಾರನ್ನು ನೋಡಿದರೆ ಒಂದು ಕ್ಷಣ, ಇದು ಲ್ಯಾಂಬೋರ್ಗಿನಿ ಕಾರಿನಂತೆ ಭಾಸವಾಗುತ್ತದೆ.

ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ, ಮೆಕ್ಯಾನಿಕ್ ನೂರುಲ್ ಹಕ್​ನ ಶ್ರಮವನ್ನು ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ. ವಿನ್ಯಾಸಗೊಳಿಸಿರುವ ಲ್ಯಾಂಬೋರ್ಗಿನಿ ಕಾರನ್ನು ಸ್ವೀಕರಿಸಲು ಸಂತೋಷವಾಗುತ್ತಿದೆ. ಅವರ ಎಲ್ಲಾ ಭವಿಷ್ಯದ ಪ್ರಯತ್ನಗಳಿಗೆ ನನ್ನ ಶುಭಾಶಯಗಳು ಎಂದು ಹೇಳಿಕೊಂಡಿದ್ದಾರೆ.

ಅಸ್ಸಾಂನ ಕರೀಂಗಂಜ್ ಜಿಲ್ಲೆಯಲ್ಲಿ ಮೆಕ್ಯಾನಿಕ್ ಆಗಿರುವ ನೂರುಲ್ ಹಕ್ ಮಾರುತಿ ಸ್ವಿಫ್ಟ್ ಕಾರನ್ನು, ಐಷಾರಾಮಿ ಲ್ಯಾಂಬೋರ್ಗಿನಿ ಕಾರಿನಂತೆ ಮಾರ್ಪಾಡು ಮಾಡಿದ್ದಾರೆ. ನಂತರ ಗುವಾಹಟಿಗೆ ತೆರಳಿ ಮುಖ್ಯಮಂತ್ರಿಗೆ ಉಡುಗೊರೆಯಾಗಿ ನೀಡಿದ್ದಾರೆ.

ನನಗೆ ಲ್ಯಾಂಬೋರ್ಗಿನಿಯಂತಹ ಸ್ಪೋರ್ಟ್​ ಕಾರುಗಳನ್ನು ಡ್ರೈವ್ ಮಾಡಲು ಇಷ್ಟ. ಹೀಗಾಗಿ ಸ್ವಿಫ್ಟ್​ ಕಾರನ್ನು ಲ್ಯಾಂಬೋರ್ಗಿನಿಯಂತೆ ವಿನ್ಯಾಸಗೊಳಿಸಿದೆ. ಸ್ವಿಫ್ಟ್​ ಕಾರನ್ನು ಮಾರ್ಪಾಡು ಮಾಡಲು ನಾಲ್ಕು ತಿಂಗಳು ಸಮಯ ತಗುಲಿದ್ದು, 10 ಲಕ್ಷ ರೂ. ಖರ್ಚಾಗಿದೆ ಎಂದು ನೂರುಲ್ ಹಕ್ ಹೇಳಿಕೊಂಡಿದ್ದಾನೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net