ಅಸ್ಸಾಂ ಎಕ್ಸಿಟ್‌ ಪೋಲ್:‌ ನಳನಳಿಸಲಿದೆ ಕಮಲ, ಕರದೊಳು ತುಮುಲ

assam
Published on

ನವದೆಹಲಿ: ಪಂಚರಾಜ್ಯಗಳ ಚುನಾವಣೆಗೆ ತೆರೆ ಬಿದ್ದ ಬೆನ್ನಿಗೆ ವಿವಿಧ ರಾಜ್ಯಗಳ ಮತದಾನೋತ್ತರ ಸಮೀಕ್ಷೆಗಳೂ ಹೊರಹೊಮ್ಮಿವೆ. ಅಸ್ಸಾಂಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳು ನಡೆಸಿರುವ ಎಕ್ಸಿಟ್‌ ಪೋಲ್‌ನಲ್ಲಿ ಕಮಲ ಮತ್ತೆ ನಳನಳಿಸುವ ಲಕ್ಷಣಗಳು ಗೋಚರಿಸಿವೆ. ಹಲವು ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಅತಿ ಹೆಚ್ಚು ಸ್ಥಾನಗಳಿಸುವ ಅಂಶ ಹೊರಬಿದಿದ್ದು, ಕಾಂಗ್ರೆಸ್‌ ನೇತೃತ್ವದ ಯುಪಿಎ ನಂತರದ ಸ್ಥಾನದಲ್ಲಿ ಇರಲಿರುವುದು ಕಂಡುಬಂದಿದೆ. ಈ ಮೂಲಕ ಅಧಿಕಾರ ಹಿಡಿಯವ ವಿಷಯದಲ್ಲಿ ಕೈ ಪಕ್ಷದಲ್ಲಿ ತುಮುಲ ಕಂಡುಬಂದಿದ್ದರೂ ಅಚ್ಚರಿ ಇಲ್ಲ.

126 ವಿಧಾನಸಭಾ ಕ್ಷೇತ್ರಗಳ ಈ ರಾಜ್ಯದಲ್ಲಿ ಟೈಮ್ಸ್‌ ನೌ ಸಿ-ವೋಟರ್‌ ಸಮೀಕ್ಷೆ ಪ್ರಕಾರ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 53ರಿಂದ 66 ಸೀಟುಗಳನ್ನು ಗಳಿಸಲಿದ್ದು, ಮತ್ತೆ ಅಧಿಕಾರಕ್ಕೆ ಬರುವ ಎಲ್ಲ ಸಾಧ್ಯತೆಗಳು ಕಂಡುಬಂದಿವೆ. ಮತ್ತೊಂದೆಡೆ ಯುಪಿಎ 58-71 ಸೀಟುಗಳನ್ನು ಗೆಲ್ಲುವ ಲಕ್ಷಣ ಗೋಚರಿಸಿದೆ.
ಚಾಣಕ್ಯ ಕೂಡ ಎನ್‌ಡಿಎ ಮೈತ್ರಿಕೂಟವು 70 ಸೀಟುಗಳೊಂದಿಗೆ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದಿದ್ದೆ, ಜನ್‌ ಕಿ ಬಾತ್‌ ಸಮೀಕ್ಷೆ ಎನ್‌ಡಿಎ 73 ಸ್ಥಾನಗಳನ್ನು ಗೆಲ್ಲಲಿದೆ ಎಂದಿದೆ.

ಪೋಲ್‌ ಆಫ್‌ ಪೋಲ್ಸ್‌ ಪ್ರಕಾರ ಎನ್‌ಡಿಎ ಮೈತ್ರಿಕೂಟವೇ ಜಯಭೇರಿ ಗಳಿಸಲಿದ್ದು, 72 ಸ್ಥಾನಗಳಲ್ಲಿ ಗೆಲ್ಲಲಿದೆ ಹಾಗೂ ಯುಪಿಎ 53 ಸ್ಥಾನಗಳನ್ನು ಗಳಿಸಲಿದೆ ಎಂದು ತಿಳಿಸಿದೆ. ಸಿಎನ್‌ಎಕ್ಸ್‌ ಸರ್ವೇಯು ಎನ್‌ಡಿಎ 79, ಯುಪಿಎ 45 ಸೀಟುಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಇನ್ನು ಪಿ-ಮಾರ್ಕ್‌ ಪ್ರಕಾರ ಎನ್‌ಡಿಎಗೆ 66, ಯುಪಿಎಗೆ 60 ಸ್ಥಾನಗಳಲ್ಲಿ ಜಯ ಸಿಗಲಿದೆ.

ಆದರೆ 2016ರ ಅಂಕಿ-ಅಂಶಗಳಿಗೆ ಹೋಲಿಸಿದರೆ ಎನ್‌ಡಿಎಗೆ ಈ ಸಲ ಕಡಿಮೆ ಸ್ಥಾನಗಳು ಸಿಗಲಿವೆ. ಆ ಚುನಾವಣೆಯಲ್ಲಿ ಎನ್‌ಡಿಎಗೆ 86 ಮತ್ತು ಯುಪಿಎಗೆ 26 ಸ್ಥಾನಗಳಲ್ಲಿ ಜಯ ಲಭಿಸಿದ್ದವು. ಇನ್ನು ಎನ್‌ಡಿಎಗೆ ಸೀಟುಗಳ ಪ್ರಕಾರ ಇಳಿಕೆ ಕಂಡಿದ್ದರೂ ಮತಗಳಿಕೆಯ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. 2016ರಲ್ಲಿ ಶೇ. 41.5 ಮತಗಳನ್ನು ಸೆಳೆದಿದ್ದ, ಎನ್‌ಡಿಎಗೆ ಈ ಸಲ ಶೇ. 42.9 ಮತಗಳು ಬರುವ ಅಂದಾಜು ಸಿಕ್ಕಿದೆ. ಇನ್ನು 2016ರಲ್ಲಿ ಶೇ. 31 ಮತ ಗಳಿಸಿದ್ದ ಯುಪಿಎಗೆ ಈ ಸಲ ಶೇ. 48.8 ಮತಗಳು ಲಭಿಸುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net