

ದೀಸ್ಪುರ್: ಕರೊನಾ ಬಿಕ್ಕಟ್ಟಿನ ನಡುವೆಯೂ ಅಸ್ಸಾಂನ 126 ವಿಧಾನಸಭಾ ಸ್ಥಾನಗಳಿಗೆ ನಡೆದ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು, ಸದ್ಯ ಟ್ರೆಂಡ್ ಪ್ರಕಾರ ಬಿಜೆಪಿ ಅಧಿಕಾರ ಗದ್ದುಗೆ ಏರುವ ಸಾಧ್ಯತೆ ಇದೆ.
11.30ರ ವೇಳೆಗೆ ಅಸ್ಸಾಂನಲ್ಲಿ ಬಿಜೆಪಿ 50 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ 19 ಸ್ಥಾನದಲ್ಲಿ ಮುಂದಿದೆ. ಒಟ್ಟು 126 ಸ್ಥಾನಗಳಲ್ಲಿ ಅಧಿಕಾರದ ಗದ್ದುಗೆ ಏರಲು 64 ಸ್ಥಾನ ಬೇಕಾಗಿದೆ.
ಮತಎಣಿಕೆ ನಡುವೆಯೇ ಮಾಧ್ಯಮದೊಂದಿಗೆ ಮಾತನಾಡಿರುವ ಅಸ್ಸಾಂ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್, ಸದ್ಯದ ಟ್ರೆಂಡ್ ನೋಡಿದರೆ, ಭಾರತೀಯ ಜನತಾ ಪಾರ್ಟಿ ಸರ್ಕಾರ ರಚನೆ ಮಾಡುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಾರ್ಚ್ 27, ಏಪ್ರಿಲ್ 1 ಮತ್ತು ಏಪ್ರಿಲ್ 6 ರಂದು ಅಸ್ಸಾಂನಲ್ಲಿ ಚುನಾವಣೆ ಮೂರು ಹಂತಗಳಲ್ಲಿ ನಡೆಯಿತು. ಅಸ್ಸಾಂನಲ್ಲಿ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್, ಎಐಯುಡಿಎಫ್, ಬೊಡೋಲ್ಯಾಂಡ್ ಪೀಪಲ್ಸ್ ಕಣದಲ್ಲಿವೆ.
ಇಂಡಿಯಾ ಟುಡೆ-ಆಕ್ಸಿಸ್ ಮೈ ಇಂಡಿಯಾ ಎಕ್ಸಿಟ್ ಪೊಲ್ ಪ್ರಕಾರ ಅಸ್ಸಾಂನಲ್ಲಿ ಎನ್ಡಿಎ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲಿದೆ ಎಂಬ ಮುನ್ಸೂಚನೆ ನೀಡಿದೆ. (ಏಜೆನ್ಸೀಸ್)