ಎಫ್ ಐಆರ್ ಗೂ ಮುನ್ನ ಅಭಿಪ್ರಾಯ ಕೇಳಿ

FIR-2
Published on

ಬೆಂಗಳೂರು: ಕಂದಾಯ ಇಲಾಖೆ ಅಧಿಕಾರಿ, ನೌಕರರ ವಿರುದ್ಧ ಖಾಸಗಿ ದೂರು ಬಂದರೆ ಮೇಲಧಿಕಾರಿಗಳ ಅಭಿಪ್ರಾಯ ಪಡೆದು ಎಫ್ ಐಆರ್ ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗಿದೆ.

ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗ್ರಾಮ ಆಡಳಿತಾಧಿಕಾರಿಗಳು ಇತ್ತೀಚೆಗೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಂದಾಯ ಸಚಿವ ಕೃಷ್ಣಬೈರೇಗೌಡ, ಪ್ರತಿಭಟನಾನಿರತರ ಸಭೆ ಕರೆದು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದ್ದರು. ಇದರ ಬೆನ್ನಲ್ಲೆ ವಿಎಒಗಳ ವಿರುದ್ಧ ಎ್ಐಆರ್ ದಾಖಲಿಸುವ ಸಂಬಂಧ ಡಿಜಿ-ಐಜಿಪಿ ಡಾ.ಅಲೋಕ್ ಮೋಹನ್ ಅವರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ ಪತ್ರ ಬರೆದಿದ್ದಾರೆ.

ಇಲಾಖೆ ಅಧಿಕಾರಿ, ನೌಕರರು ಭೂ ಸಂಬಂಧಿತ, ಮರಳು ಅಕ್ರಮ ಸಾಗಣೆ ತಡೆ, ಪಡಿತರ ಚೀಟಿ ವಿತರಣೆ, ವಂಶವೃಕ್ಷ, ಜಾರಿ ಹಾಗೂ ಇತರ ಪ್ರಮಾಣ ಪತ್ರಗಳ ವಿತರಣೆ ಹಾಗೂ ಮ್ಯುಟೇಷನ್‌ಗಳು ಇತ್ಯಾದಿ ಮುಖ್ಯ ಮತ್ತು ಸೂಕ್ಷ್ಮ ವಿಷಯಗಳನ್ನು ನಿರ್ವಹಿಸುತ್ತಾರೆ. ಇಂತಹ ಸಂದರ್ಭದಲ್ಲಿ ಕೆಲ ಖಾಸಗಿ ವ್ಯಕ್ತಿಗಳು, ಅಧಿಕಾರಿ, ನೌಕರರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ಅಲ್ಲದೆ, ಪೊಲೀಸ್ ಠಾಣೆಗೆ ದೂರು ಸಹ ಸಲ್ಲಿಸುತ್ತಾರೆ. ಠಾಣಾಧಿಕಾರಿಗಳು ಎಫ್ ಐಆರ್ ದಾಖಲಿಸಿ ಶಿಸ್ತುಕ್ರಮಕ್ಕೆ ಮುಂದಾಗುತ್ತಾರೆ. ಇದರಿಂದ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ ನೈತಿಕ ಸ್ಥೈರ್ಯ ಕುಸಿಯುತ್ತಿದೆ.

ಖಾಸಗಿ ವ್ಯಕ್ತಿಗಳು ದೂರು ಸಲ್ಲಿಸಿದರೆ ನೇರವಾಗಿ ಎ್ಐಆರ್ ದಾಖಲಿಸಬಾರದು. ಸಂಬಂಧಪಟ್ಟ ತಹಸೀಲ್ದಾರ್, ಉಪ ವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿಗಳೊಂದಿಗೆ ಪ್ರಕರಣದ ಬಗ್ಗೆ ಸಮಾಲೋಚಿಸಿ ಅವರ ಅಭಿಪ್ರಾಯ ಪಡೆದು ಪ್ರಕರಣದ ಸತ್ಯಾಸತ್ಯತೆ ಪರಿಶೀಲಿಸಿ ಪ್ರಕರಣ ದಾಖಲಿಸುವುದು ಒಳಿತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿ ಮತ್ತು ಠಾಣಾಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಡಿಜಿ-ಐಜಿಪಿ ಡಾ. ಅಲೋಕ್ ಮೋಹನ್ ಅವರಿಗೆ ಕಟಾರಿಯಾ ಪತ್ರದಲ್ಲಿ ಮನವಿ ಮಾಡಿದ್ದಾರೆ. ಅಲ್ಲದೆ, ಕರ್ತವ್ಯನಿರತ ಅಧಿಕಾರಿ, ನೌಕರರಿಗೆ ಸೂಕ್ತ ರಕ್ಷಣೆ ನೀಡಲು ಮತ್ತು ದೌರ್ಜನ್ಯ ಎಸಗುವ ವ್ಯಕ್ತಿಗಳ ಮೇಲೆ ವಿಳಂಬ ಇಲ್ಲದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net