Rahul Gandhi | ನನ್ನ ಅನುಮತಿ ತೆಗೆದುಕೊಳ್ಳಿ ಎಂದು ಸಚಿವರಿಗೆ ಹೇಳಿದ ಸಂಸದ ರಾಹುಲ್​ ಗಾಂಧಿ..ನಂತರ ಮಾತಿನ ಚಕಮಕಿ!

Raebareli meeting
Published on

Rahul Gandhi: ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಮೇಲ್ವಿಚಾರಣಾ ಸಮಿತಿ (ದಿಶಾ) ಸಭೆಯಲ್ಲಿ ಸ್ಥಳೀಯ ಸಂಸದ ರಾಹುಲ್ ಗಾಂಧಿ ಮತ್ತು ಉತ್ತರ ಪ್ರದೇಶದ ಸಚಿವ ದಿನೇಶ್ ಪ್ರತಾಪ್ ಸಿಂಗ್ ನಡುವಿನ ಮಾತಿನ ಚಕಮಕಿಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​​ ಆಗಿದೆ.

ಈ ವಿಷಯವಾಗಿ ಸ್ಪಷ್ಟನೆ ನೀಡಿರುವ ಸಚಿವ ದಿನೇಶ್​​, ರಾಹುಲ್ ಗಾಂಧಿ ತಾವೇ ಈ ಸಭೆಯ ಅಧ್ಯಕ್ಷರು, ಇಲ್ಲಿನ ಚರ್ಚೆಗಳು ಅವರ ಅನುಮೋದನೆಯ ನಂತರವೇ ಮುಂದುವರಿಯಬೇಕು ಎಂದು ಹೇಳಿದರು, ಆದ್ದರಿಂದ ಈ ಘಟನೆ ನಡೆದಿದೆ ಎಂದರು. ರಾಹುಲ್ ಗಾಂಧಿ ಲೋಕಸಭೆಯಲ್ಲಿ ಸ್ಪೀಕರ್ ನೀಡಿರುವ ನಿರ್ದೇಶನಗಳನ್ನು ಪಾಲಿಸದೆ ತಮ್ಮ ಇಚ್ಛೆಯ ಅನುಸಾರ ನಡೆದುಕೊಳ್ಳುತ್ತಾರೆ, ಹೀಗಿದ್ದಾಗ ಈ ಸಭೆಯಲ್ಲಿ ಅವರ ಮಾತಿನಂತೆ ನಡೆದುಕೊಳ್ಳುವ ಅಗತ್ಯವಿಲ್ಲ ಎಂದರು.

ರಾಹುಲ್ ಗಾಂಧಿ ಸಭೆಗೆ ಹಾಜರಾದಾಗ, ತಾವೇ ಮಾಲೀಕರಂತೆ ವರ್ತಿಸುತ್ತಾರೆ, ರಾಯ್‌ಬರೇಲಿ ಜನರಿಗೆ ಸೇವೆ ಸಲ್ಲಿಸುವ ವಿಷಯದಲ್ಲಿ ನಾನು ಯಾವಾಗಲೂ ರಾಹುಲ್​ಗೆ ಬೆಂಬಲ ನೀಡುತ್ತೇನೆ. ಆದರೆ ದಿಶಾದಂತಹ ಸರ್ಕಾರಿ ಕಾರ್ಯಕ್ರಮವನ್ನು ತಮ್ಮ ಪಕ್ಷದ ವೇದಿಕೆಯನ್ನಾಗಿ ಬಳಸಿಕೊಂಡಾಗ ಮತ್ತು ಸರ್ಕಾರವನ್ನು ಟೀಕಿಸಿದಾಗ ಸುಮ್ಮನಿರಲು ಸಾಧ್ಯವಿಲ್ಲ ಎಂದರು. ಕೇಂದ್ರ ಸರ್ಕಾರ ಉತ್ತರ ಪ್ರದೇಶಕ್ಕೆ ನೀಡುವ 43 ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಹಕ್ಕನ್ನು ಮಾತ್ರ ರಾಹುಲ್ ಗಾಂಧಿ ಹೊಂದಿದ್ದಾರೆ, ಆ ಎಲ್ಲ ಯೋಜನೆಗಳಿಗೆ ಹಣವನ್ನು ಸರಿಯಾಗಿ ಬಳಸಲಾಗುತ್ತಿದೆಯೇ ಎಂದು ಪರಿಶೀಲಿಸುವುದಕ್ಕೆ ಗಾಂಧಿ ತಮ್ಮನ್ನು ಸೀಮಿತಗೊಳಿಸಿಕೊಳ್ಳಬೇಕಿತ್ತು ಎಂದರು, ಮುಂದುವರೆದು ಮಾತನಾಡಿದ ಸಚಿವ ದಿನೇಶ್​​​​, ದಿಶಾ ಸಭೆಯ ಮಾರ್ಗಸೂಚಿಗಳನ್ನು ರಾಹುಲ್​​ ಓದುವುದಿಲ್ಲ, ಸಭೆಯಲ್ಲಿ ನಡೆದ ಚಟುವಟಿಕೆಗಳು ವ್ಯಾಪ್ತಿಗೆ ವಿರುದ್ಧವಾಗಿತ್ತು, ಆದ್ದರಿಂದ ಅದನ್ನು ವಿರೋಧಿಸಿದ್ದೇನೆ ಹೇಳಿದರು.

ಆಗಿದ್ದೇನು..?

ಸಭೆಯ ಅಧ್ಯಕ್ಷತೆ ವಹಿಸಿದ್ದ ರಾಹುಲ್ ಗಾಂಧಿ ತಮ್ಮ ಅಧಿಕಾರವನ್ನು ಚಲಾಯಿಸಿ, ಇಲ್ಲಿ ಮಾತನಾಡುವ ಮೊದಲು ತಮ್ಮ ಅನುಮೋದನೆ ಪಡೆಯುವಂತೆ ಕೇಳಿಕೊಂಡಾಗ ಈ ಬಿಸಿ ಚರ್ಚೆಗಳು ಆರಂಭವಾಗಿವೆ. ಈ ಮೊದಲು ಕಾಂಗ್ರೆಸ್​​​ನಲ್ಲಿದ್ದ, ಸದ್ಯ ಬಿಜೆಪಿಯಲ್ಲಿರುವ ಸಚಿವ ದಿನೇಶ್ ಪ್ರತಾಪ್ ಸಿಂಗ್, ಸಂಸದೀಯ ಕಾರ್ಯವಿಧಾನಗಳ ಬಗ್ಗೆ ರಾಹುಲ್​ರ ನೀತಿಯನ್ನು ಪ್ರಶ್ನಿಸಿದರು ಎನ್ನಲಾಗಿದೆ. ಲಭ್ಯವಾಗಿರುವ ವಿಡಿಯೋದಲ್ಲಿ ರಾಹುಲ್ ಗಾಂಧಿ ಸಚಿವ ದಿನೇಶ್​​​ಗೆ "ನಾನು ಈ ಸಭೆಯ ಅಧ್ಯಕ್ಷತೆ ವಹಿಸುತ್ತಿದ್ದೇನೆ. ನಿಮಗೆ ಏನಾದರೂ ಹೇಳುವುದಿದ್ದರೆ ಮೊದಲು ಕೇಳಿ, ನಂತರ ನಾನು ನಿಮಗೆ ಮಾತನಾಡಲು ಅವಕಾಶ ನೀಡುತ್ತೇನೆ" ಎಂದು ಹೇಳುತ್ತಿರುವುದು ಕಂಡುಬರುತ್ತದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, "ಲೋಕಸಭಾ ಸ್ಪೀಕರ್ ಅವರ ಮಾತುಗಳನ್ನೆ ಗೌರವಿಸದ ನಿಮ್ಮ ಮಾತುಗಳನ್ನು ನಾನೇಕೆ ಪಾಲಿಸಲಿ" ಎಂದು ಪ್ರಶ್ನಿಸುತ್ತಾರೆ.

ಸ್ಥಳೀಯ ಸಂಸದರು ದಿಶಾ ಸಭೆಯ ಅಧ್ಯಕ್ಷತೆ ವಹಿಸುತ್ತಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಮಾರ್ಗಸೂಚಿಗಳ ಪ್ರಕಾರ, 43 ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ಅನುಷ್ಠಾನಗೊಳಿಸುವುದು ಅವರ ಜವಾಬ್ದಾರಿಯಾಗಿದೆ. ಪ್ರಾದೇಶಿಕ ಅಭಿವೃದ್ಧಿ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಲು ಮೂರು ತಿಂಗಳಿಗೊಮ್ಮೆ ನಡೆಯುವ ಈ ಸಭೆಯಲ್ಲಿ, ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳು ಭಾಗವಹಿಸುತ್ತಾರೆ.(ಏಜೆನ್ಸೀಸ್​​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net