ಲಾಕ್​ಡೌನ್​ನಲ್ಲಿ ಪ್ರತಿ ಗಂಟೆಗೆ 90 ಕೋಟಿ ರೂ. ಸಂಪಾದಿಸಿದ ಮುಖೇಶ್ ಅಂಬಾನಿ!

mukesh ambani
Published on

ನವದೆಹಲಿ: ಕರೊನಾ ಸೋಂಕು ಜಗತ್ತನ್ನೇ ತಲ್ಲಣಿಸಿದ್ದರೂ, ಕೋವಿಡ್-19 ಹೊಡೆತಕ್ಕೆ ಎಂಥೆಂಥ ಶ್ರೀಮಂತರು ಕೂಡ ಅಲುಗಾಡಿ ಹೋಗಿದ್ದರೂ ಉದ್ಯಮಿ ಮುಖೇಶ್ ಅಂಬಾನಿ ಅವರ ಶ್ರೀಮಂತಿಕೆಯ ಪಟ್ಟ ಒಂಚೂರೂ ಏರುಪೇರಾಗಿಲ್ಲ. ಏಕೆಂದರೆ ಕಳೆದ ಒಂಬತ್ತು ವರ್ಷಗಳಿಂದ ಅವರು ಅತ್ಯಂತ ಶ್ರೀಮಂತ ಭಾರತೀಯ ಆಗಿಯೇ ಉಳಿದಿದ್ದಾರೆ.

2020ರ ಐಐಎಫ್​ಎಲ್​ ವೆಲ್ತ್​ ಹುರುನ್​ ಇಂಡಿಯಾ ರಿಚ್​ ಲಿಸ್ಟ್​ ಪ್ರಕಟವಾಗಿದ್ದು, ಆ ಪ್ರಕಾರ ರಿಲಯನ್ಸ್ ಸಂಸ್ಥೆಯ ಮುಖ್ಯಸ್ಥ ಮುಖೇಶ್​ ಅಂಬಾನಿ ಏಷ್ಯಾದ ಅತಿ ಶ್ರೀಮಂತ ಮಾತ್ರವಲ್ಲ ಜಗತ್ತಿನಲ್ಲೇ ನಾಲ್ಕನೇ ಅತಿದೊಡ್ಡ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಮಾತ್ರವಲ್ಲ, ಮಾರ್ಚ್​ ನಂತರ ಲಾಕ್​ಡೌನ್ ಅವಧಿಯಲ್ಲಿ ಮುಖೇಶ್ ಅಂಬಾನಿ ಪ್ರತಿ ಗಂಟೆಗೆ 90 ಕೋಟಿ ರೂ. ಗಳಿಸಿದಂತಾಗಿದೆ.

ಅಂಬಾನಿ 6,58,400 ಕೋಟಿ ರೂ. ವೈಯಕ್ತಿಕ ಆಸ್ತಿ ಹೊಂದಿದ್ದು, ಜಾಗತಿಕ ಮಟ್ಟದ ಟಾಪ್​-5 ಶ್ರೀಮಂತರ ಪೈಕಿ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ. ಅಂಬಾನಿ ಆಸ್ತಿ ಕಳೆದ ವರ್ಷಕ್ಕಿಂತ ಈ ವರ್ಷ ಶೇ. 73 ಹೆಚ್ಚಳಗೊಂಡಿದೆ.

ಹುರುನ್ ಇಂಡಿಯಾ ರಿಚ್​ ಲಿಸ್ಟ್​ಗೆ 2020ರ ಆಗಸ್ಟ್​ 31ರ ಒಳಗೆ ದೇಶದಲ್ಲಿ 1000 ಕೋಟಿ ಅಥವಾ ಅದಕ್ಕಿಂತಲೂ ಹೆಚ್ಚು ಆಸ್ತಿ ಹೊಂದಿರುವವರನ್ನು ಮಾತ್ರ ಪರಿಗಣಿಸಲಾಗಿದೆ. ಹೀಗಾಗಿ 2020ರ ಈ ಪಟ್ಟಿಯಲ್ಲಿ 828 ಭಾರತೀಯರಿದ್ದಾರೆ. ಲಂಡನ್​ ಮೂಲದ ಹಿಂದುಜಾ ಬ್ರದರ್ಸ್​, ಎಚ್​ಸಿಎಲ್​ ಸ್ಥಾಪಕ ಶಿವ ನಾಡಾರ್​, ಗೌತಮ್ ಅದಾನಿ, ಅಜೀಮ್​ ಪ್ರೇಮ್​​ಜಿ ಕ್ರಮವಾಗಿ 2, 3, 4 ಮತ್ತು 5ನೇ ಸ್ಥಾನ ಹೊಂದಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net