Asia Cup 2025: ಭಾರತ-ಪಾಕ್​ ಪಂದ್ಯ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಕೋರ್ಟ್​

Untitled design - 2025-09-11T121023.937
Published on

Asia Cup 2025: ಏಷ್ಯಾಕಪ್‌ನ ಭಾಗವಾಗಿ ಸೆಪ್ಟೆಂಬರ್ 14 ರಂದು ದುಬೈನಲ್ಲಿ ನಿಗದಿಯಾಗಿದ್ದ ಭಾರತ-ಪಾಕಿಸ್ತಾನ ಟಿ-20 ಪಂದ್ಯವನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಗುರುವಾರ ನಿರಾಕರಿಸಿದೆ ಎಂದು ಬಾರ್ ಮತ್ತು ಬೆಂಚ್ ವರದಿ ಮಾಡಿದೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರ್ ನಂತರ ಪಾಕಿಸ್ತಾನದೊಂದಿಗೆ ಕ್ರಿಕೆಟ್ ಪಂದ್ಯವನ್ನು ಆಯೋಜಿಸುವುದು ರಾಷ್ಟ್ರೀಯ ಘನತೆ ಮತ್ತು ಸಾರ್ವಜನಿಕ ಭಾವನೆಗೆ ಅಸಮಂಜಸ ಸಂದೇಶವನ್ನು ರವಾನಿಸುತ್ತದೆ ಎಂದು ಉರ್ವಶಿ ಜೈನ್ ನೇತೃತ್ವದ ನಾಲ್ವರು ಕಾನೂನು ವಿದ್ಯಾರ್ಥಿಗಳು ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಲಾಗಿದೆ.

ಕ್ರಿಕೆಟ್ ಪಂದ್ಯ ಭಾನುವಾರ ನಿಗದಿಯಾಗಿದ್ದು, ಶುಕ್ರವಾರದಂದು ಪ್ರಕರಣವನ್ನು ಪಟ್ಟಿ ಮಾಡದಿದ್ದರೆ ಅರ್ಜಿಯು ನಿಷ್ಪ್ರಯೋಜಕವಾಗುತ್ತದೆ ಎಂದು ವಕೀಲರು ವಾದಿಸಿದಾಗ, ಅರ್ಜಿ ವಿಚಾರಣೆ ನಡೆಸಿದ ಪೀಠ, "ಈ ಭಾನುವಾರ ಪಂದ್ಯ? ಅದರ ಬಗ್ಗೆ ನಾವು ಏನು ಮಾಡಬಹುದು? ಅದು ಇರಲಿ. ಪಂದ್ಯ ಮುಂದುವರಿಯಬೇಕು" ಕೋರ್ಟ್​​ ಹೇಳುವ ಮೂಲಕ ಅರ್ಜಿ ವಜಾ ಮಾಡಿದೆ ಎಂದು ವರದಿ ಉಲ್ಲೇಖಿಸಿದೆ.

2025ರ ಏಷ್ಯಾಕಪ್‌ಗಾಗಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 14 ರಂದು ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net