ಉರಿಗೌಡ-ನಂಜೇಗೌಡ ನಮಗೆ ಹೆಮ್ಮೆ, ಆದರೆ…; ಸಿನಿಮಾ ಚಿತ್ರಕಥೆ ಬಗ್ಗೆ ಅಶ್ವತ್ಥ ನಾರಾಯಣ್ ಹೇಳಿದ್ದಿಷ್ಟು…

Film
Published on

ಬೆಂಗಳೂರು: ಉರಿಗೌಡ-ನಂಜೇಗೌಡ ಪಾತ್ರಗಳನ್ನು ಆಧರಿಸಿರುವ ಸಿನಿಮಾ ನಿರ್ಮಾಣ ಮಾಡಲು ಸಚಿವ ಮುನಿರತ್ನ ಮುಂದಾಗಿದ್ದು, ಈಗಾಗಲೇ ಮುಹೂರ್ತದ ದಿನಾಂಕವನ್ನೂ ಘೋಷಿಸಿದ್ದಾರೆ. ಈ ವೇಳೆ ಮುನಿರತ್ನ ಈ ಸಿನಿಮಾಗೆ ಸಚಿವ ಅಶ್ವತ್ಥ ನಾರಾಯಣ್ ಚಿತ್ರಕಥೆ ಬರೆಯುತ್ತಾರೆ ಎಂದು ಹೇಳಿದ್ದರು. ಇದೀಗ ಈ ವಿಚಾರವಾಗಿ ಅಶ್ವತ್ಥ ನಾರಾಯಣ್ ಸ್ಪಷ್ಟನೆ ನೀಡಿದ್ದು, ಉರಿಗೌಡ-ನಂಜೇಗೌಡ ನಮ್ಮ ಹೆಮ್ಮೆ. ಆದರೆ ನಾವು ಯಾವುದೇ ಚಿತ್ರಕಥೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.

ನಮ್ಮ ಸ್ನೇಹಿತರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಉರಿಗೌಡ-ನಂಜೇಗೌಡ ಇಬ್ಬರು ಪ್ರಮುಖ ನಾಯಕರು ಇದ್ದದ್ದು ಸತ್ಯ. ಟಿಪ್ಪು ಜಯಂತಿ ಮಾಡಬಾರದು ಎಂದು ನಾವು ಆರಂಭದಿಂದ ಹೇಳಿದ್ದೇವೆ. ಟಿಪ್ಪು ನರಹಂತಕ, ಅವನು ನಮ್ಮ ನಾಡಿನವನಲ್ಲ. ಟಿಪ್ಪು ಸುಲ್ತಾನ್ ವಿಚಾರ ಬೆಳಕಿಗೆ ಬಂದಿದೆ ಅಷ್ಟೇ. ಈ ಬಗ್ಗೆ ಅಧ್ಯಯನ ಮಾಡುವವರು ಮಾಡಲಿ. ನಾವು ಯಾವುದನ್ನು ಮುಚ್ಚಿಡುವ ಪ್ರಯತ್ನ ಮಾಡುತ್ತಿಲ್ಲ. ಉರಿಗೌಡ-ನಂಜೇಗೌಡ ನಮ್ಮ ಪಾಲಿಗೆ ಹೀರೋ ಅಷ್ಟೇ ಎಂದು ಅಶ್ವತ್ಥ ನಾರಾಯಣ್ ಹೇಳಿದರು.

ಇದೇ ವೇಳೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡುತ್ತಾ, ಉರಿಗೌಡ-ನಂಜೇಗೌಡ ಇದ್ದದ್ದು ಸತ್ಯ. ಸುವರ್ಣ ಮಂಡ್ಯ ಪುಸ್ತಕ ಬರೆದಿರುವುದ ಯಾರು? ಆ ಪುಸ್ತಕದಲ್ಲಿರುವ ಎರಡು ಹೆಸರು ಕಾಲ್ಪನಿಕವಾ? ವಿರೋಧ ಮಾಡುವವರು ಮಾಡುತ್ತಾರೆ. ಅಭಿಮಾನ ಇರುವವರು ಟಿಪ್ಪು ಸುಲ್ತಾನ್ ಫೋಟೋಗಳನ್ನು ತೆಗೆದುಕೊಂಡು ಹೋಗಿ ಅವರವರ ಮನೆಯಲ್ಲಿ, ಕಾರುಗಳ ಮೇಲೆ ಅಂಟಿಸಿಕೊಳ್ಳಲಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net