

ಬೆಂಗಳೂರು: ಅಧಿಕಾರ ದುರ್ಬಳಕೆ ಕುರಿತು ಪ್ರಶ್ನೆಗಳಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೊದಲಿಗೆ ಉತ್ತರಿಸಲಿ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸವಾಲು ಹಾಕಿದರು.
ಪಕ್ಷದ ಕಚೇರಿಯಲ್ಲಿ ಗುರುವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಬೆಂಗಳೂರು ಶಿಕ್ಷಕರ ಕ್ಷೇತ್ರದ ಅಭ್ಯರ್ಥಿ ಪುಟ್ಟಣ್ಣ ವಿರುದ್ಧ ಎಚ್ಡಿಕೆ ಮಾಡಿದ ಆರೋಪಗಳಿಗೆ ತಿರುಗೇಟು ಕೊಟ್ಟರು.
ಅಕ್ರಮಗಳಾಗಿದ್ದರೆ ಸರ್ಕಾರ ಖಂಡಿತ ಕ್ರಮಕೈಗೊಳ್ಳಲಿದೆ. ಗಾಳಿಯಲ್ಲಿ ಗುಂಡು ಹೊಡೆದಂತಹ ಆರೋಪಗಳು ಹಾಗೂ ಬೇಜವಾಬ್ದಾರಿ ಹೇಳಿಕೆಗಳಿಂದ ಪಕ್ಷದ ಅಭ್ಯರ್ಥಿ ಗೆಲುವನ್ನು ತಡೆಯಲಾಗದು. ಬೆಂಗಳೂರು ಶಿಕ್ಷಕರ ಕ್ಷೇತ್ರ ಸೇರಿದಂತೆ 4 ವಿಧಾನ ಪರಿಷತ್ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ನಿಶ್ಚಿತ ಎಂದು ಅಶ್ವತ್ಥನಾರಾಯಣ ಹೇಳಿದರು.
ಸುದ್ದಿಗೋಷ್ಠಿಯಲ್ಲಿದ್ದ ಅಭ್ಯರ್ಥಿ ಪುಟ್ಟಣ್ಣ ಪ್ರತಿಕ್ರಿಯಿಸಿ, ಎಚ್ಡಿಕೆ ಆರೋಪಗಳಿಗೆ ಈಗ ಉತ್ತರಿಸುವುದಿಲ್ಲ. ಪ್ರತ್ಯಾರೋಪ ಮಾಡಲು ಬಯಸುವುದಿಲ್ಲ. ಕಳೆದ 3 ಅವಧಿಯಲ್ಲಿ ಮಾಡಿದ ಕೆಲಸಗಳು, ಪಕ್ಷದ ವರ್ಚಸ್ಸು, ಕೇಂದ್ರ-ರಾಜ್ಯ ಸರ್ಕಾರಗಳ ಸಾಧನೆ ಗಮನಿಸಿ 4ನೇ ಬಾರಿಯೂ ಅವಕಾಶ ಕೊಡಲು ಮತದಾರರಲ್ಲಿ ಮನವಿ ಮಾಡಿಕೊಳ್ಳುತ್ತಿರುವೆ ಎಂದರು.