

ಶ್ರಾವಣ ಮಾಸದಲ್ಲಿ ಒಂದು ಶುಕ್ರವಾರ ವರಮಹಾಲಕ್ಷ್ಮಿ ವ್ರತವೆಂದು ಆಚರಿಸುವ ಪುರಾಣೋಕ್ತವಾದ ಪ್ರಾಚೀನ ಸಂಪ್ರದಾಯ ಬೆಳೆದು ಬಂದಿದೆ. ಹಬ್ಬಕ್ಕೂ ವ್ರತಕ್ಕೂ ವ್ಯತ್ಯಾಸವಿದೆ. ಹಬ್ಬ ಎಂಬುದನ್ನು ನಿಯಮಗಳಿಗೆ ಒಳಪಡದೆ ಅವರವರ ಪ್ರಾಂತ್ಯ ಪದ್ಧತಿಗಳಂತೆ ಆಚರಿಸಬಹುದು.ಆದರೆ ವ್ರತವನ್ನು ಶಾಸ್ತ್ರ ನಿಯಮಗಳಿಗೆ ಅನುಗುಣವಾಗಿ ಆಚರಿಸಬೇಕು.
ಸಾಮಾನ್ಯವಾಗಿ ಪ್ರತಿ ವರ್ಷವೂ 2ನೇ ಶುಕ್ರವಾರವೇ ವರಮಹಾಲಕ್ಷ್ಮಿ ಆಚರಣೆ ಇರುತ್ತದೆ. ಆದರೆ ಅದೇ ನಿಯಮವಿಲ್ಲ. ಶ್ರಾವಣದಲ್ಲಿ ಐದು ಶುಕ್ರವಾರಗಳು ಬಂದಾಗ ಗೊಂದಲವಾಗುತ್ತದೆ. ‘ಪೂರ್ಣಿ ಮೋಪಾಂತ್ಯಭಾರ್ಗವೇ’ ಎಂಬ ಭವಿಷ್ಯೋತ್ತರ ಪುರಾಣದ ವಚನವಿದೆ. ಪೂರ್ಣಿಮಾ- ಹುಣ್ಣಿಮೆ, ಉಪಾಂತ್ಯ-ಹತ್ತಿರದ, ಭಾರ್ಗವೇ- ಶುಕ್ರವಾರದಲ್ಲಿ ಎಂಬ ನಿರ್ಣಯ ಎಲ್ಲ ಗೊಂದಲಗಳನ್ನು ಪರಿಹರಿಸುತ್ತದೆ. ಅಂತೆಯೇ ಈ ಬಾರಿ ಹುಣ್ಣಿಮೆಗೆ ಹತ್ತಿರವಾದ 3ನೇ ಶುಕ್ರವಾರದಂದೇ ಆಚರಣೆ ಮಾಡುವುದು ಅತ್ಯಂತ ಸೂಕ್ತವಾಗಿದೆ.
ವ್ರತಾನುಷ್ಠಾನ: ಪೂಜೆ ನೆರವೇರಿಸುವ ಆಚಾರ್ಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದು ಈ ವ್ರತದ ಸಂಕಲ್ಪವನ್ನು ಮಾಡಬೇಕು. ನಂತರ ಮನೆಯಲ್ಲಿ ಗುರು ಹಿರಿಯರಿಗೆ ನಮಸ್ಕರಿಸಬೇಕು. ಆರಂಭದಲ್ಲಿ ಪೂಜೆಯು ನಿರ್ವಿಘ್ನವಾಗಿ ಸಾಗಲೆಂದು ಗಣಪತಿ ಪೂಜೆ ಮಾಡಬೇಕು. ನಂತರ ಯಮುನಾ ಪೂಜೆ. ಸಾಮಾನ್ಯವಾಗಿ ಎಲ್ಲ ವ್ರತಗಳನ್ನು ನದಿಯ ತೀರದಲ್ಲಿ ಆಚರಿಸಬೇಕೆಂದು ಶಾಸ್ತ್ರಗಳು ವಿಧಿಸಿವೆ. ಆದರೆ ಈಗಿನ ಅನಾನುಕೂಲ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ. ಹೀಗಾಗಿ ಸಕಲ ನದಿ ತೀರ್ಥಗಳ ಸನ್ನಿಧಾನವಿರುವ ತುಳಸಿ ಸಮೀಪದಲ್ಲಿ ಯಮುನಾ ಕಳಶವನ್ನು ಸ್ಥಾಪಿಸಬೇಕು. ಆ ಕಲಶದಲ್ಲಿ ಗಂಗೆ, ಗೋದಾವರಿ, ಯಮುನಾ ಮೊದಲಾದ ನಧ್ಯಭಿಮಾನಿಗಳನ್ನು ಆವಾಹಿಸಬೇಕು. ನಂತರ ಆ ಕಲಶ ವನ್ನು ಮುತ್ತೈದೆಯರು ತೆಗೆದುಕೊಂಡು ಮನೆಯ ಒಳಗೆ ಪ್ರವೇಶಿಸಬೇಕು.
ವರಮಹಾಲಕ್ಷ್ಮಿಯ ಪೂಜೆಗೆಂದು ಅಲಂಕೃತವಾದ ಮಂಟಪದಲ್ಲಿ ಇಟ್ಟು, ಅದರ ಮುಂದೆ ಮತ್ತೊಂದು ಕಳಶವನ್ನು ಇಟ್ಟು ಅದರಲ್ಲಿ ಶ್ರೀಲಕ್ಷ್ಮಿನಾರಾಯಣರಿಬ್ಬರ ಆವಾಹನೆ ಮಾಡಿ ಪೂಜಿಸಬೇಕು. ಹೀಗೆ ಯಮುನಾ ಪೂಜೆಯ ನಂತರ ಮಹಾಲಕ್ಷ್ಮಿ ದೇವಿಯ ಪೂಜೆಯನ್ನು ಮಾಡುವ ಕಳಶಕ್ಕೆ ವಿಧಿವತ್ತಾಗಿ ಷೋಡ ಶೋಪಚಾರ ಪೂಜೆಯನ್ನು ಪ್ರಾರಂಭಿಸಬೇಕು. ಕಳಶಕ್ಕೆ ನಾರಾಯಣ ಅಷ್ಟಾಕ್ಷರ ಮಂತ್ರದಿಂದ ಅಭಿಮಂತ್ರಿಸಬೇಕು. ನಂತರ ಪೀಠ ಪೂಜೆ. ಕಲಶದಲ್ಲಿ ಶುದ್ಧವಾದ ನೀರನ್ನು ತುಂಬಿಸಿ ಅರಿಶಿಣ ಕುಂಕುಮ ಗಂಧ ಅಕ್ಷತೆ ಹೂವು ಮೊದಲಾದ ಮಂಗಲ ದ್ರವ್ಯಗಳನ್ನು ಹಾಕಬೇಕು. ಅವರವರ ಸಂಪ್ರದಾಯದಂತೆ ಪ್ರತಿಮೆಯಲ್ಲಿ ಅಥವಾ ಕಲಶದಲ್ಲಿ ಪ್ರಾಣ ಪ್ರತಿಷ್ಠಾಪನೆಯ ವಿಧಿಯನ್ನು ಪೂರೈಸಬೇಕು. ಈ ವ್ರತಕ್ಕೆ ಬದ್ಧರಾಗಲು ದೋರ ಬಂಧನವನ್ನು ವಿಧಿಸಿದ್ದಾರೆ.(ದಾರ ಕಟ್ಟಿಕೊಳ್ಳುವುದು ಅಥವಾ ಕಂಕಣ ಬಂಧನ).
ಅಂತೆಯೇ 9 ಅಥವಾ 12 ಎಳೆಯ ದಾರವನ್ನು ಅರಿಶಿನದ ನೀರಿನಲ್ಲಿ ನೆನೆಸಿ ವೀಳ್ಯದೆಲೆಯಲ್ಲಿಟ್ಟು ದೇವಿಯ ಮುಂದಿಟ್ಟು ಪೂಜಿಸಬೇಕು. ಕಲಶದಲ್ಲಿ ಧ್ಯಾನ ಆವಾಹನಾದಿಗಳನ್ನು ಮಾಡಬೇಕು. ಪಂಚಾಮೃತ ಅಭಿಷೇಕಕ್ಕಾಗಿ ಲಕ್ಷ್ಮೀನಾರಾಯಣರ ಪ್ರತಿಮೆಯನ್ನು ಆರಂಭದಲ್ಲಿಯೇ ಇಟ್ಟುಕೊಂಡು ಅದನ್ನೇ ನಂತರ ತಟ್ಟೆಯಲ್ಲಿರಿಸಿ ಅಭಿಷೇಕ ಮಾಡಬೇಕು. ನಂತರ ಅದನ್ನು ಶುದ್ದಿಗೊಳಿಸಿ ವಸ್ತ್ರ, ಮಂಗಳಸೂತ್ರ, ಗೆಜ್ಜೆವಸ್ತ್ರ ಹಾಗೂ ಯಥಾಶಕ್ತಿ ಆಭರಣಗಳಿಂದ ಅಲಂಕರಿಸಿ ಪೂಜಿಸಬೇಕು. ನಂತರ ಅರಿಶಿನ ಕುಂಕುಮ ಅಕ್ಷತೆ ಇವುಗಳನ್ನು ಸಮರ್ಪಿಸಬೇಕು. ವಿವಿಧ ಸುಗಂಧ ಪುಷ್ಪಗಳನ್ನು ಅರ್ಪಿಸಬೇಕು. ಮಂತ್ರಾಕ್ಷತೆ ಹೂಗಳನ್ನು ಹಾಕುತ್ತಾ ಲಕ್ಷ್ಮಿ ದೇವಿಯ ಅಂಗಪೂಜೆಯನ್ನು ಮಾಡಬೇಕು. ದೇವಿಯ ಮುಂದಿರಿಸಿದ ದಾರಕ್ಕೆ ಲಕ್ಷ್ಮಿ ದೇವಿಯ 9 ನಾಮಗಳಿಂದ ದೋರ ಗ್ರಂಥ ಪೂಜೆಯನ್ನು ಮಾಡಬೇಕು.
ಸ್ತ್ರೀಯರು ಶ್ರೀವರಲಕ್ಷ್ಮಿ ಕಲಶದ ಮುಂದೆ ಒಂದು ತಟ್ಟೆಯನ್ನಿಟ್ಟು ಅಲ್ಲಿ ಬಿಡಿ ಹೂವುಗಳಿಂದ ಅಥವಾ ಕುಂಕುಮದಿಂದ ಶತನಾಮ ಪೂಜೆಯ ಅರ್ಚನೆಯನ್ನು ಮಾಡಬೇಕು. ದೀಪವನ್ನು ಸಮರ್ಪಿಸಬೇಕು. ಊದುಬತ್ತಿ ಅಥವಾ ಗಂಧದ ಪುಡಿಯಿಂದ ಧೂಪವನ್ನು ಸಮರ್ಪಿಸಬೇಕು. ನಂತರ ಲಕ್ಷ್ಮೀದೇವಿಯ ನೈವೇದ್ಯ. ವರಮಹಾಲಕ್ಷ್ಮಿಗೆ ನಾನಾ ತರಹದ ಭಕ್ಷಗಳನ್ನು ಅದರಲ್ಲಿಯೂ ಮುಖ್ಯವಾಗಿ ಶಾವಿಗೆಯ ಪಾಯಸ ಹಾಗೂ ಕಡಲೆ ಹೂರಣದ ಹೋಳಿಗೆ, ಹಣ್ಣುಗಳನ್ನು ನಿವೇದಿಸುವುದು ಶ್ರೇಷ್ಠವೆಂದಿದ್ದಾರೆ. ಐದು ವೀಳ್ಯದೆಲೆ ಸುಣ್ಣ ಅಡಿಕೆಯಿಂದ ಕೂಡಿದ ತಾಂಬೂಲವನ್ನು ಅರ್ಪಿಸಬೇಕು. ಅದರೊಂದಿಗೆ ದಕ್ಷಿಣೆಯನ್ನು ಸಮರ್ಪಿಸಬೇಕು. ಅನುಕೂಲವಿದ್ದವರು ಹೂರಣದಲ್ಲಿಯೇ ಆರತಿಯನ್ನು ಮಾಡಬೇಕು. ಇಲ್ಲದಿದ್ದರೆ ಬತ್ತಿಯಿಂದಲೂ ಮಂಗಳಾರತಿಯನ್ನು ಮಾಡಬಹುದು.
ಕೊನೆಗೆ ಪ್ರದಕ್ಷಿಣೆ ನಮಸ್ಕಾರ, ಪ್ರಾರ್ಥನೆ ಸಮರ್ಪಿಸಬೇಕು. ಕೈಯಲ್ಲಿ ಮಂತ್ರಾಕ್ಷತೆ, ಹೂಗಳನ್ನು ಹಿಡಿದುಕೊಂಡು ಪ್ರಾರ್ಥಿಸಿ, ಪೂಜೆಯ ಸಮಾಪನೆ ಮಾಡಿದ ನಂತರ ದಾರವನ್ನು ಹಿರಿಯ ಮುತ್ತೈದೆಯರು ಕೈಯಿಂದ ಅಥವಾ ಪತಿಯ ಕೈಯಿಂದ ಹೂವಿನೊಂದಿಗೆ ಸೇರಿಸಿ ಬಲಗೈಗೆ ಕಟ್ಟಿಸಿಕೊಳ್ಳಬೇಕು. ಪೂಜೆಯನ್ನು ಸಾಂಗವಾಗಿ ಮಾಡಿಸಿದ ಆಚಾರ್ಯರಿಗೆ ವಾಯನದಾನವನ್ನು ಕೊಟ್ಟು ನಮಸ್ಕರಿಸಬೇಕು.ಮನೆಯ ಮುಂದಿನ ಮಾವಿನ ತೋರಣ, ಪರಿವಾರದವರ ಆಗಮನ, ಶಾಸ್ತ್ರೋಕ್ತವಾಗಿ ಪೂಜೆ, ಪರಸ್ಪರ ಮಂಗಲ ದ್ರವ್ಯಗಳ ವಿನಿಮಯ, ಸಾಂಪ್ರದಾಯಿಕ ಶೈಲಿಯ ಅಡುಗೆ ಇವುಗಳೇ ಹಬ್ಬದ ಮೆರುಗನ್ನು ಹೆಚ್ಚಿಸುತ್ತವೆಯೇ ಹೊರತು ಆಡಂಬರದ ಅವಶ್ಯಕತೆ ಇಲ್ಲ.
ಪ್ರಾರ್ಥನೆ: ವಿದ್ಯೆಗಾಗಿ ಸರಸ್ವತಿಯ ಪೂಜೆ ಧನಕ್ಕಾಗಿ ಲಕ್ಷ್ಮೀ ಪೂಜೆ ಎಂಬ ಮೂಢ ನಂಬಿಕೆಯಿದೆ. ಜ್ಞಾನದ ಆಗರವೆನಿಸಿದ ವೇದಗಳಿಗೆ ಅಭಿಮಾನಿಯಾದ ಜಗನ್ಮಾತೆ ಮಹಾಲಕ್ಷ್ಮಿಯು ಸಂಪತ್ತನ್ನೇ ನೀಡುತ್ತಾಳೆ. ಅದು ಕೇವಲ ಧನವಲ್ಲ. ಜ್ಞಾನದ ಸಂಪತ್ತು. ಸಜ್ಜನಿಕೆಯಿಂದಲೇ ಬಾಳುವ ಸಂಪತ್ತು. ಸದಾ ಸಮಾಜದ ಒಳಿತಿಗಾಗಿ ಶ್ರಮಿಸುವ ಸುಸ್ವಭಾವದ ಸಂಪತ್ತು. ಸುಜ್ಞಾನವನ್ನು ಪ್ರಾರ್ಥಿಸುತ್ತಾ ಅಷ್ಟೈಶ್ವರ್ಯವನ್ನು ಅನುಗ್ರಹಿಸುವ ವರಮಹಾಲಕ್ಷ್ಮೀ ಪೂಜೆ ಸಂಪನ್ನಗೊಳ್ಳಲಿ.