ಆಷಾಢ ಶುಕ್ರವಾರ : ಶ್ರೀ ಚಾಮುಂಡೇಶ್ವರಿ ದರ್ಶನಕ್ಕೆ ಪಾಸ್ ವ್ಯವಸ್ಥೆ ಇಲ್ಲ

chamundi hills
Published on

ಮೈಸೂರು: ಚಾಮುಂಡಿಬೆಟ್ಟದಲ್ಲಿ ಆಷಾಢ ಶುಕ್ರವಾರ ದಿನಗಳಲ್ಲಿ ತಾಯಿ ಶ್ರೀ ಚಾಮುಂಡೇಶ್ವರಿ ದರ್ಶನ ಪಡೆಯಲು ಈ ಹಿಂದೆ ಇದ್ದ ಪಾಸ್ ವ್ಯವಸ್ಥೆ ರದ್ದು ಪಡಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಹೇಳಿದರು.

ಪ್ರತಿಯೊಬ್ಬರು ಸರತಿ ಸಾಲಿನಲ್ಲಿ ನಿಂತು ತಾಯಿ ಶ್ರೀ ಚಾಮುಂಡೇಶ್ವರಿಯ ದರ್ಶನ ಪಡೆಯಬೇಕು ಎಂಬ ಉದ್ದೇಶದಿಂದ ಪಾಸ್ ವ್ಯವಸ್ಥೆ ರದ್ದುಪಡಿಸಲಾಗಿದೆ. ದೇವರ ದರ್ಶನಕ್ಕೆ 50 ಮತ್ತು 100 ರೂ. ಟಿಕೆಟ್ ವ್ಯವಸ್ಥೆ ಇದೆ. ಇದನ್ನು ಹೊರತು ಪಡಿಸಿ ಪಾಸ್ ವ್ಯವಸ್ಥೆ ಇರುವುದಿಲ್ಲ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಆಷಾಢ ಶುಕ್ರವಾರ ಬೆಟ್ಟಕ್ಕೆ ಖಾಸಗಿ ವಾಹನದಲ್ಲಿ ತೆರಳುವುದಕ್ಕೆ ನಿರ್ಬಂಧ ವಿಧಿಸಲಾಗಿದ್ದು, ಬೆಟ್ಟಕ್ಕೆ ತೆರಳಲು ಎಂದಿನಂತೆ ಬೆಳಗ್ಗೆ 5 ರಿಂದ ರಾತ್ರಿ 8ವರೆಗೆ ನಗರ ಸಾರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ. ಆಷಾಢ ಶುಕ್ರವಾರ ಉತ್ತಮವಾಗಿ ಆಚರಣೆ ಮಾಡಲು ಎಲ್ಲ ರೀತಿಯ ನೆರವು ನೀಡಲಾಗುವುದು ಎಂದು ಹೇಳಿದರು.

ಕಬಿನಿ ಜಲಾಶಯದಿಂದ ಕಬಿನಿ ಎಡದಂಡೆ ಹಾಗೂ ಬಲದಂಡೆ ನಾಲೆಗಳ ಮೂಲಕ ಜು.10 ರಿಂದ 16 ದಿನಗಳ ಕಾಲ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕೆ ನೀರು ಹರಿಸಲಾಗುವುದು. ಅಚ್ಚುಕಟ್ಟು ವ್ಯಾಪ್ತಿಯ ಕೆರೆಗಳನ್ನು ಭರ್ತಿ ಮಾಡಲಾಗು ವುದು. ಮುಂದೆ ಒಳ ಹರಿವಿನ ಪ್ರಮಾಣವನ್ನು ನೋಡಿಕೊಂಡು ಕೃಷಿ ಚಟುವಟಿಕೆಗೂ ನೀರು ಹರಿಸಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ರಾಜ್ಯ ಮಟ್ಟಕ್ಕೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ಡೆಂೆಯ ಪ್ರಮಾಣ ಕಡಿಮೆ ಇದೆ. ಡೆಂೆ ಜ್ವರ ನಿಯಂತ್ರಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಜಿಲ್ಲೆಯಲ್ಲಿ 3,595 ಡೆಂೆ ಪರೀಕ್ಷೆಗಳನ್ನು ನಡೆಸಲಾಗಿದ್ದು, 496 ಜನರಿಗೆ ಡೆಂೆ ಜ್ವರ ಇರುವುದು ದೃಢಪಟ್ಟಿತು. ಎಲ್ಲರು ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗುತ್ತಿದ್ದಾರೆ. ಪ್ರಸ್ತುತ 14 ಸಕ್ರೀಯ ಪ್ರಕರಣಗಳು ಮಾತ್ರ ಇವೆ. ಒಬ್ಬರು ಜ್ವರಕ್ಕೆ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಎಸ್‌ಸಿಇಪಿ ಹಾಗೂ ಟಿಎಸ್‌ಪಿ ಅನುದಾನ ಅನ್ಯ ಉದ್ದೇಶಗಳಿಗೆ ಬಳಕೆ ಮಾಡುವುದನ್ನು ತಡೆಯುವ ಸಲುವಾಗಿ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ನಮ್ಮ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭಿವೃದ್ಧಿಗೆ ಮೀಸಲಿರಿಸಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಂಡಿಲ್ಲ. ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ಬಳಿ ಸಾಕಷ್ಟು ಅನುದಾನವಿದೆ. ಈ ವಿಚಾರದಲ್ಲಿ ಪ್ರತಿಪಕ್ಷದವರು ಅನಗತ್ಯ ಟೀಕೆ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net