

ನರೇಗಲ್ಲ(ಗದಗ): ಲಾಕ್ಡೌನ್ ನಿಯಮ ಉಲ್ಲಂಘಿಸುವವರಿಗೆ ಬುದ್ಧಿ ಹೇಳಲು ಸ್ವತಃ ಆಶಾ ಕಾರ್ಯಕರ್ತೆಯರೇ ಲಾಠಿ ಹಿಡಿದು ಬೀದಿಗಿಳಿದಿದ್ದಾರೆ.
ಸಮೀಪದ ಮಾರನಬಸರಿ ಹಾಗೂ ಜಕ್ಕಲಿಯ ಆಶಾ ಕಾರ್ಯಕರ್ತೆಯರು ಗ್ರಾಮಗಳಲ್ಲಿ ಬೇಕಾಬಿಟ್ಟಿಯಾಗಿ ತಿರುಗಾಡುವ ವಾಹನ ಸವಾರರಿಗೆ, ಹರಟೆ ಕಟ್ಟೆಗಳ ಮೇಲೆ ಗುಂಪು ಗುಂಪಾಗಿ ಕುಳಿತು ಹರಟೆ ಹೊಡೆಯುವವರಿಗೆ ಹಾಗೂ ಮಾಸ್ಕ್ ಧರಿಸದೇ ಓಡಾಡುವರಿಗೆ ಬುದ್ಧಿ ಕಲಿಸುತ್ತಿದ್ದಾರೆ.
ತಿಳಿವಳಿಕೆ ಹೇಳಿದರೂ ಗ್ರಾಮಸ್ಥರು ಮಾಸ್ಕ್ ಧರಿಸದೆ ಬೇಕಾಬಿಟ್ಟಿಯಾಗಿ ಓಡಾಡುತ್ತಿದ್ದರು. ಗುಂಪು ಗುಂಪಾಗಿ ಕುಳಿತು ಹರಟೆ ಹೊಡೆಯುತ್ತಿದ್ದರು. ಪೊಲೀಸರು ಬರುತ್ತಿದ್ದಂತೆ ಎಲ್ಲರೂ ಓಡಿ ತಮ್ಮ ಮನೆಗಳನ್ನು ಸೇರುತ್ತಿದ್ದರು. ಆದ್ದರಿಂದ, ನಾವು ಸ್ವಯಂ ಪ್ರೇರಣೆಯಿಂದ ಲಾಠಿ ಹಿಡಿದು ಬುದ್ಧಿ ಹೇಳಲು ಮುಂದಾಗಿದ್ದೇವೆ. ಸಾರ್ವಜನಿಕರು ಉತ್ತಮವಾಗಿ ಸ್ಪಂದಿಸುವ ಮೂಲಕ ನಮ್ಮ ಕಾರ್ಯಕ್ಕೆ ಸಹಕಾರ ನೀಡುತ್ತಿದ್ದಾರೆ ಎಂದು ಕಾರ್ಯಕರ್ತೆಯರಾದ ಬಸಮ್ಮ ಅಂಗಡಿ, ಪದ್ಮಾ ಅಬ್ಬಿಗೇರಿ, ರತ್ನಾ ತಳವಾರ ತಿಳಿಸಿದರು.