Asaduddin Owaisi | ಪಹಲ್ಗಾಮ್ ದಾಳಿ ವೇಳೆ ನೀವು ಪ್ರಧಾನಿಯಾಗಿದ್ದರೆ ಏನು ಮಾಡುತಿದ್ದಿರಿ ಎಂದ ಪತ್ರಕರ್ತ; ಅದಕ್ಕೆ ಸಂಸದ ಓವೈಸಿ ಹೇಳಿದ್ದೇನು..?

Asaduddin Owaisi
Published on

Asaduddin Owaisi: ಊಹಾಪೋಹಗಳಲ್ಲಿ ತೊಡಗಿಸಿಕೊಳ್ಳುವ ಬದಲು ವಾಸ್ತವ ಮತ್ತು ಪ್ರಸ್ತುತ ಜವಾಬ್ದಾರಿಗಳ ಮೇಲೆ ಗಮನ ಕೇಂದ್ರೀಕರಿಸುವುದು ಉತ್ತಮ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವರದಿಗಾರರೊಬ್ಬರು, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ಸಮಯದಲ್ಲಿ ತಾವು ಪ್ರಧಾನಿಯಾಗಿದ್ದರೆ ಏನು ಮಾಡುತಿದ್ದಿರಿ ಎಂಬ ಪ್ರಶ್ನೆಗೆ ಉತ್ತರಿಸಿದ ಓವೈಸಿ, ನಾನು ವಾಸ್ತವ ಅಂಶಗಳ ಬಗ್ಗೆ ಮಾತ್ರ ಪ್ರತಿಕ್ರಿಯೆ ನೀಡುತ್ತೇನೆ, ನನ್ನ ವ್ಯಾಪ್ತಿಯ ಬಗ್ಗೆ ನನಗೆ ತಿಳಿದಿದ್ದು, ಅಧಿಕಾರದಲ್ಲಿ ಕುಳಿತುಕೊಳ್ಳುವುದು ಅಥವಾ ಮಂತ್ರಿಯಾಗುವುದು ಮಾತ್ರ ನಮ್ಮ ಗುರಿಯಾಗಬಾರದು ಎಂದು ಹೇಳಿದರು.

ಕದನ ವಿರಾಮ ಘೋಷಿಸಿದ್ದೇಕೆ..?

ಆಪರೇಷನ್​​ ಸಿಂಧೂರ ಸಮಯದಲ್ಲಿನ ಕದನ ವಿರಾಮದ ಬಗ್ಗೆ ಮಾತನಾಡಿದ ಓವೈಸಿ, ಪಹಲ್ಗಾಮ್ ದಾಳಿಯ ಬಳಿಕ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಲು ದೊಡ್ಡ ಅವಕಾಶ ಸಿಕ್ಕಿತು, ಆದರೆ, ಅದನ್ನು ಏಕೆ ಅರ್ಧಕ್ಕೆ ನಿಲ್ಲಿಸಲಾಯಿತು ನನಗೆ ಅರ್ಥವಾಗುತ್ತಿಲ್ಲ. ಅದು ಯುದ್ಧದಂತಹ ವಾತಾವರಣ, ಇದ್ದಕ್ಕಿದ್ದಂತೆ ಏಕೆ ಕಾರ್ಯಾಚರಣೆಗಳು ಸ್ಥಗಿತಗೊಂಡವು. ಆಗ ಸಿಕ್ಕ ಅಮೂಲ್ಯ ಅವಕಾಶವನ್ನು ಕೈ ಬಿಟ್ಟು, ಈಗ ಸಂಸತ್ತಿನಲ್ಲಿ ಕುಳಿತು ಪಿಒಕೆ ಪಡೆಯುವ ಬಗ್ಗೆ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಇದೇ ವರ್ಷದ ಏಪ್ರಿಲ್ 22 ರಂದು ಮಿನಿ ಸ್ವಿಟ್ಜರ್ಲೆಂಡ್ ಖ್ಯಾತಿಯ ಬೈಸರನ್ ಕಣಿವೆಯಲ್ಲಿ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದರು, ಇದರಲ್ಲಿ ಒಬ್ಬ ನೇಪಾಳಿ ಪ್ರಜೆ ಸೇರಿದಂತೆ ಇಪ್ಪತ್ತಾರು ಜನರು ಸಾವನ್ನಪ್ಪಿದರು ಮತ್ತು ಅನೇಕರು ಗಾಯಗೊಂಡರು.

ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಭಾರತವು ತನ್ನ ಆಪರೇಷನ್ ಸಿಂಧೂರ ಅಡಿಯಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಒಂಬತ್ತು ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡಿತು. ದಶಕಗಳಷ್ಟು ಹಳೆಯದಾದ ಸಿಂಧೂ ಜಲ ಒಪ್ಪಂದವನ್ನು ಅನಿರ್ದಿಷ್ಟಾವಧಿಗೆ ಸ್ಥಗಿತಗೊಳಿಸುವ ಮೂಲಕ ಮತ್ತು ಎಲ್ಲಾ ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್ ಕಳುಹಿಸಿ ಪಾಕ್​ ವಿರುದ್ಧ ಕಠಿಣ ಕ್ರಮ ಕೈಗೊಂಡಿತು. ಮೇ 10 ರಂದು ಭಾರತ ಮತ್ತು ಪಾಕಿಸ್ತಾನದ ಮೇಲಿನ ಎಲ್ಲಾ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸುವ ಒಪ್ಪಂದಕ್ಕೆ ಬರಲಾಯಿತು.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net