ಕೊಟ್ಟ ಮಾತಿನಂತೆ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲಿ

21blrp4-m.j.nishanth
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್
Published on

ಬೇಲೂರು: ಕಾಂಗ್ರೆಸ್ ಪಕ್ಷದ ನೇತಾರ, ಮಾಜಿ ಸಚಿವ ಬಿ.ಶಿವರಾಮ್ ವಿರುದ್ಧ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಅವರ ಹೇಳಿಕೆಗಳು ಸುಳ್ಳಿನಿಂದ ಕೂಡಿದ್ದು, ಅವರು ಕೊಟ್ಟ ಮಾತಿನಂತೆ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಮೊದಲು ರಾಜೀನಾಮೆ ನೀಡಬೇಕು. ಇಲ್ಲದಿದ್ದಲ್ಲಿ ಪಕ್ಷದಿಂದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ.ನಿಶಾಂತ್ ಹೇಳಿದರು.

ಪಕ್ಷದ ತತ್ವ-ಸಿದ್ಧಾಂತಕ್ಕೆ ಬೆಲೆ ಕೊಡದ ಯಾರೊಬ್ಬರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಪ್ರೆಶ್ನೆಯೇ ಇಲ್ಲ. ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಅವರ ಮನಸ್ಥಿತಿ ಆ ಸಂದರ್ಭ ಹೇಗಿತ್ತೊ ಗೊತ್ತಿಲ್ಲ. ಮಾಜಿ ಸಚಿವ ಬಿ.ಶಿವರಾಮ್‌ರವರು ರಾಜಕೀಯ ಇತಿಹಾಸದಲ್ಲಿ ಬಡವರ, ನಿರ್ಗತಿಕರ ಪರವಾಗಿ 40 ವರ್ಷದಿಂದ ಕೆಲಸ ಮಾಡುತ್ತಿದ್ದಾರೆ. ಬೇಲೂರಿನಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಆದರೆ ಅಂತಹವರ ವಿರುದ್ಧ ನಾನೇ, ನನ್ನಿಂದಲೇ ಎಂಬ ಅಹಂನಿಂದ ಮಾತನಾಡುತ್ತ ಹತ್ತಿದ ಏಣಿಯನ್ನು ಮೊದಲೇ ಒದೆಯುವಂತಹ ಮನುಷ್ಯನಾಗಿದ್ದಾರೆ ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್. ಬಿ.ಶಿವರಾಮ್ ಅವರ ಶ್ರಮವಿಲ್ಲದೆ ಪುರಸಭೆಯಲ್ಲಿ 17 ಸ್ಥಾನಗಳು ಗೆಲ್ಲಲ್ಲು ಸಾಧ್ಯವಿರಲಿಲ್ಲ. ಅಶೋಕ್ ಅವರು ಅಧ್ಯಕ್ಷರಾಗಲು ಮಾಜಿ ಸಚಿವರೇ ಕಾರಣ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಶೋಕ್ ದೇವರ ಮುಂದೆ ನಿಂತು ಪ್ರಮಾಣ ಮಾಡಿ ದಿನಾಂಕ ಗುರುತು ಮಾಡಿದ್ದರು. ಆದರೆ ಅಧ್ಯಕ್ಷರಾಗಿ ಎಂಟು ತಿಂಗಳಾಗಿದೆ. ಅಧಿಕಾರದ ದುರಾಸೆಯಿಂದ ಕೆಲವರನ್ನು ಹೊಗಳಿ, ಮತ್ತೆ ಕೆಲವರನ್ನು ತೆಗಳುವ ಕೆಲಸ ಮಾಡುತ್ತಿದ್ದಾರೆ. ಇದನ್ನು ಬಿಟ್ಟು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ಅಶೋಕ್ ಅಧ್ಯಕ್ಷರಾಗುವ ಸಂದರ್ಭ ಬಿ.ಶಿವರಾಮ್ ಅವರಿಂದ ಹಣ ಸಹಾಯ ಪಡೆದಿದ್ದರು. ನಮ್ಮ ಪಕ್ಷಕ್ಕೆ ಅದರದ್ದೇ ಆದ ನೀತಿ-ನಿಯಮಗಳಿವೆ. ಆದ್ದರಿಂದ ಮೊದಲು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿ. ಇಲ್ಲವೇ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟು ಮತ್ತೆ ಚುನಾವಣೆ ಎದುರಿಸಿ. ಗೆದ್ದು ಬಂದರೆ ನಿಮ್ಮ ತಾಕತ್ತು ಗೊತ್ತಾಗುತ್ತದೆ. ಎಲ್ಲ ಸದಸ್ಯರಿಗೂ ಅವಕಾಶ ಕೊಡಬೇಕೆಂದು ಶನಿದೇವರ ದೇಗುಲದಲ್ಲಿ ಆಣೆ ಮಾಡಿ ಚನ್ನಕೆಶವಸ್ವಾಮಿ ರಥೋತ್ಸವ ಹಾಗೂ ಅಂಬೇಡ್ಕರ್ ಜಯಂತಿ ಮುಗಿದ ನಂತರ ರಾಜೀನಾಮೆ ಕೊಡುತ್ತೇನೆ ಎಂದಿದ್ದವರು ಈಗ ಏಕೆ ದಾರಿ ತಪ್ಪುತಿದ್ದೀರಿ. ಜನರು ನೋಡುತ್ತಿದ್ದಾರೆ. ವಿರೋಧ ಪಕ್ಷದವರು ನಮ್ಮ ಪಕ್ಷವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಅದು ಸಾಧ್ಯವಿಲ್ಲ. ಪಕ್ಷದಲ್ಲಿ ಭಿನ್ನಾಭಿಪ್ರಾಯ ಸಾಮಾನ್ಯ. ಅದನ್ನು ಹೈಕಮಾಂಡ್ ಬಗೆಹರಿಸುತ್ತದೆ. ಪುರಸಭೆ ಅಧ್ಯಕ್ಷ ಎ.ಆರ್.ಅಶೋಕ್ ಗೌರವಯುತವಾಗಿ ರಾಜೀನಾಮೆ ನೀಡಿ, ಮಾಜಿ ಸಚಿವ ಬಿ.ಶಿವರಾಮ್ ಅವರ ಕ್ಷಮೆ ಕೇಳಬೇಕು. ಇಲ್ಲದಿದ್ದಲ್ಲಿ ಪಕ್ಷದಿಂದ ಏನು ಕ್ರಮ ಕೈಗೊಳ್ಳಬೇಕೋ ಅದಕ್ಕೆ ಸಿದ್ಧತೆ ನಡೆದಿದ್ದು, ಈಗಾಗಲೇ ಅವರನ್ನು ಕಾಂಗ್ರೆಸ್ ಪಕ್ಷದ ನಗರಾಧ್ಯಕ್ಷ ಸ್ಥಾನದಿಂದ ವಜಾಗೋಳಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಬೀಕ್ಕೊಡು ಹೋಬಳಿ ಅಧ್ಯಕ್ಷ ಮಲ್ಲೇಶ್(ಮಲ್ಲಿಕಾ) ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net