ಸಖತ್​ ಐಡಿಯಾ ಗುರು| ಎಷ್ಟು ಉಳಿಸುತ್ತೀರೋ ಅಷ್ಟು ಗಳಿಸಿದಂತೆ!

Tejashwini
Published on

ವರುಷಕೊಂದು ಹೊಸತು ಜನ್ಮ, ಹರುಷಕೊಂದು ಹೊಸತು ನೆಲೆಯು... ಇದು ವರಕವಿ ದ.ರಾ. ಬೇಂದ್ರೆಯವರ ಯುಗಾದಿ ಕವನದಲ್ಲಿರುವ ಆಶಯ. ಅದನ್ನೇ ಈ ಕರೊನಾ ಕಾಲದಲ್ಲಿ ಹೊಸ ಕ್ಯಾಲೆಂಡರ್ ವರ್ಷಕ್ಕೂ ಅನ್ವಯಿಸಬಹುದು. ಕಷ್ಟ-ನಷ್ಟದಿಂದ ಕಂಗೆಟ್ಟಿರುವ ಜನ ಹೊಸ ವರ್ಷದ ಹೊಸ್ತಿಲಲ್ಲಿ ದುಡಿಮೆಯ ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಂಥವರಿಗೆ ನೆರವಾಗಲೆಂದೇ ವಿಜಯವಾಣಿ ವಿವಿಧ ರಂಗಗಳ ಪರಿಣತರನ್ನು ಮಾತನಾಡಿಸಿದೆ. 2021 ನಿಮ್ಮ ಪಾಲಿಗೆ ‘ಯಶಸ್ವಿ ವರ್ಷ’ವಾಗಲು 21 ಸಾಧಕರು ನೀಡಿರುವ 21 ಐಡಿಯಾಗಳು ಇಲ್ಲಿವೆ.

ಎಷ್ಟು ಉಳಿಸುತ್ತೀರೋ ಅಷ್ಟು ಗಳಿಸಿದಂತೆ!

‘ಪೆನ್ನಿ ಸೇವ್ಡ್ ಈಸ್ ಪೆನ್ನಿ ಅರ್ನ್ಡ್’ ಎಂಬ ಮಾತಿದೆ. ಇದನ್ನು ಗೃಹಿಣಿಯರು, ವಿದ್ಯಾರ್ಥಿಗಳು, ಸಂಬಳದಾರರು ಹೀಗೆ ಎಲ್ಲರೂ ಪಾಲಿಸಬೇಕಾದ ಸಂದರ್ಭ ಬಂದಿದೆ. ಆರೋಗ್ಯದ ದೃಷ್ಟಿಯಿಂದ, ಭವಿಷ್ಯದ ದೃಷ್ಟಿಯಿಂದ ಉಳಿಕೆ ಸೂತ್ರವನ್ನು ನಾವು ಅಳವಡಿಸಿಕೊಳ್ಳಬೇಕಾಗುತ್ತದೆ. ಹೋಟೆಲ್​ಗೆ ಹೋಗಿ ತಿನ್ನುವುದನ್ನು ಕಡಿಮೆ ಮಾಡಿ, ಮನೆಯಲ್ಲೇ ಯೂಟ್ಯೂಬ್ ನೋಡಿ ವಿಶೇಷ ತಿನಿಸು ಸಿದ್ಧಪಡಿಸಿಕೊಂಡರೆ ಆರೋಗ್ಯ ಮತ್ತು ಉಳಿತಾಯಕ್ಕೂ ಅನುಕೂಲ. ಉಪ್ಪಿನಕಾಯಿ, ಮಸಾಲೆ ಪದಾರ್ಥ, ಸೂಪ್ ಮುಂತಾದ ಪದಾರ್ಥಗಳನ್ನು ಮನೆಯಲ್ಲೇ ಸಿದ್ಧ ಮಾಡಿಕೊಳ್ಳಲು ಅವಕಾಶವುಂಟು. ವೀಕೆಂಡ್ ಪ್ರವಾಸ ಸದ್ಯಕ್ಕೆ ಮುಂದೂಡಿದರೆ ಜೇಬಿಗೆ ಹಿತ. ಬಹಳಷ್ಟು ಜನರಿಗೆ ಅಲ್ಮೆರಾ ತುಂಬಾ ಬಟ್ಟೆಗಳಿದ್ದರೂ ಹೊಸದನ್ನು ಕೊಳ್ಳುವ ಕ್ರೇಜ್ ಇರುತ್ತದೆ. ಸೈಜ್​ನಲ್ಲಿ ಸಣ್ಣ ವ್ಯತ್ಯಾಸವಾದರೂ ಬದಲಿಸುತ್ತಾರೆ. ಆಂತಹ ಮನಸ್ಥಿತಿಗೆ ಕೆಲದಿನಗಳ ಮಟ್ಟಿಗಾದರೂ ಗುಡ್​ಬೈ ಹೇಳುವುದು ಒಳ್ಳೆಯದು. ಇರುವುದನ್ನೇ ಸಣ್ಣಪುಟ್ಟ ರಿಪೇರಿ ಮಾಡಿಕೊಂಡು ಬಳಸಬಹುದು. ಯೋಚಿಸಿ ಖರೀದಿಸಿದರೆ ಮತ್ತು ಖರೀದಿಸಿದ್ದನ್ನು ಎಚ್ಚರಿಕೆಯಿಂದ ಬಳಸಿದರೆ ಹಣ ಉಳಿಯುತ್ತದೆ. ಹೊಸ ವರ್ಷದ ಸಂದರ್ಭದಲ್ಲಿ ಹೊಸ ರೀತಿಯ ಗಳಿಕೆಗೆ ನನ್ನ ಮೂರು ಸಲಹೆಗಳಿವೆ. ಉಪ್ಪಿಟ್ಟು, ಕಿಚಡಿ ಮುಂತಾದ ರೆಡಿ ಟು ಕುಕ್ ಉತ್ಪನ್ನಗಳ ತಯಾರಿಕೆ- ಮಾರಾಟವನ್ನು ಒಂದು ಒಳ್ಳೆಯ ಉದ್ಯಮವಾಗಿಸಿಕೊಳ್ಳಬಹುದು. ವಿಶೇಷ ಕಲೆ ಇರುವವರು ಆನ್​ಲೈನ್ ಕೋಚಿಂಗ್ ನೀಡಬಹುದು. ಇಂಗ್ಲಿಷ್, ಹಿಂದಿಯಂತಹ ಭಾಷೆ ಮೇಲೆ ಹಿಡಿತ ಇದ್ದರೆ ಆನ್​ಲೈನ್ ಕ್ಲಾಸ್ ಮಾಡಿ ಗಳಿಸಬಹುದು. ಭಾಷಾಂತರ, ಕಂಟೆಂಟ್ ರೈಟಿಂಗ್​ನಲ್ಲಿ ತೊಡಗಬಹುದು. ಕೃಷಿಯಲ್ಲಿ ಆಸಕ್ತಿ ಇದ್ದರೆ ಮಿಲೆಟ್ಸ್ ಬೆಳೆಯಬಹುದು, ಮೌಲ್ಯವರ್ಧಿತ ಉತ್ಪನ್ನವನ್ನು ಸಿದ್ಧ ಮಾಡಿ ಮಾರ್ಕೆಟ್ ಮಾಡಬಹುದು. ಉದಾಹರಣೆಗೆ ನುಗ್ಗೆ ಬೆಳೆಯುವವರು ಅದರ ಎಲೆ ಪುಡಿ ಮಾಡಿ ಮಾರಬಹುದು. ಕೃಷಿ ಸಂಬಂಧಿ ಸಲಕರಣೆಗಳ ಉತ್ಪಾದನೆ, ಅವುಗಳ ಸೇವೆ ನೀಡುವ ಉದ್ಯಮಕ್ಕೂ ಬೇಡಿಕೆ ಇದೆ.

| ತೇಜಸ್ವಿನಿ ಅನಂತಕುಮಾರ್ ಮುಖ್ಯಸ್ಥೆ, ಅದಮ್ಯ ಚೇತನ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net