

ಬೆಂಗಳೂರು: ಬಿಜೆಪಿ ಸರ್ಕಾರ ದೇಶದಲ್ಲಿ 14 ಬಾರಿ ಪೆಟ್ರೊಲ್, ಡೀಸೆಲ್ ಬೆಲೆ ಹೆಚ್ಚಿಸಿದೆ. ಆಗ ಪ್ರತೀ ಬ್ಯಾರೆಲ್ ಬೆಲೆ ಕಡಿಮೆ ಇತ್ತು. ನಾವು ದರ ಏರಿಕೆಯನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದೆವು. ಬಿಜೆಪಿಯವರು ಬೆಲೆ ಇಳಿಸಿರಲಿಲ್ಲ ಎಂದು ಗೃಹ ಸಚಿವ ಡಾ.ಪರಮೇಶ್ವರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ ಏರಿಕೆಯನ್ನು ಮನಸ್ಸಿಗೆ ಬಂದ ಹಾಗೆ ಸುಮ್ಮನೆ ಹೆಚ್ಚಿಸಿಲ್ಲ. ಈ ಸಂದರ್ಭಕ್ಕೆ ಸಂಪನ್ಮೂಲ ಕ್ರೋಢೀಕರಣ ಅಗತ್ಯವಿದೆ. ಹಾಗಾಗಿ ದರ ಏರಿಕೆ ಮಾಡಲಾಗಿದೆ ಎಂದು ಸಮರ್ಥಿಸಿಕೊಂಡರು.
ಅಭಿವೃದ್ಧಿ ಕಾರ್ಯಗಳಿಗೆ ಸಂಪನೂಲ ಕ್ರೂಢೀಕರಣ ಅನಿವಾರ್ಯ. ಹಾಗಾಗಿ ತೈಲಬೆಲೆ ಹೆಚ್ಚಿಸಿದ್ದೇವೆ. ಇದರಿಂದ ಸಹಜವಾಗಿ ಅಡ್ಡಪರಿಣಾಮ ಆಗೇ ಆಗುತ್ತದೆ ಎಂದರು.
ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ ಸೇರಿದಂತೆ ಎಲ್ಲ ರಾಜ್ಯಗಳಿಗೆ ಹೋಲಿಸಿದರೆ ನಮಲ್ಲಿನ ಪೆಟ್ರೊಲ್, ಡೀಸೆಲ್ ಬೆಲೆ ಕಡಿಮೆ ಇದೆ. ಮಾರಾಟ ತೆರಿಗೆ ಹೆಚ್ಚಿಸಬೇಕೆಂಬ ಪ್ರಸ್ತಾಪ ಬಹಳ ವರ್ಷಗಳಿಂದಲೂ ಇತ್ತು. ಆದರೆ ಕ್ರಮ ಕೈಗೊಂಡಿರಲಿಲ್ಲ. ಈಗ ಇಷ್ಟು ಪ್ರಮಾಣದ ಹೆಚ್ಚಳದ ನಂತರವೂ ನಮಲ್ಲಿ ಅಕ್ಕಪಕ್ಕದ ರಾಜ್ಯಕ್ಕಿಂತಲೂ ಪೆಟ್ರೊಲ್, ಡೀಸೆಲ್ ಬೆಲೆ ಕಡಿಮೆ ಇದೆ. ಹೀಗಾಗಿ ಜನರು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ರಾಜ್ಯದಲ್ಲಿ ಯೋಜನೆಗಳು ಜಾರಿಯಾಗಬೇಕು. ವಿವಿಧ ಅಭಿವೃದ್ಧಿ ಕೆಲಸಗಳಾಗಬೇಕು. ಇದಕ್ಕೆಲ್ಲ ಸಂಪನೂಲ ಕ್ರೂಢೀಕರಣಗೊಳ್ಳಬೇಕಿದೆ. ಗ್ಯಾರಂಟಿ ಯೋಜನೆಗಳಿಗಾಗಿ ದರ ಹೆಚ್ಚಿಸಲಾಗಿದೆ ಎಂಬ ವ್ಯಾಖ್ಯಾನ ಸರಿಯಲ್ಲ ಎಂದರು.
ವಿಧಾನಸಭೆ ಚುನಾವಣಾ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪೆಟ್ರೊಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಕಡಿಮೆ ಮಾಡಲಾಗುವುದು ಎಂದು ಹೇಳಿದ್ದರು. ಈಗ ವ್ಯತಿರಿಕ್ತವಾಗಿ ದರ ಹೆಚ್ಚಿಸಲಾಗಿದೆ ಎಂಬ ಟೀಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ನಾವು ಯಾವುದೋ ಮಾತುಗಳನ್ನು ಹೇಳಿದ್ದರೆ ಅದೇ ಶಾಶ್ವತವಾಗಿ ನಿಲ್ಲುವುದಿಲ್ಲ. ಸಂದರ್ಭಾನುಸಾರ ಪರಿಸ್ಥಿತಿಗನುಗುಣವಾಗಿ ಆಡಳಿತ ನಡೆಸಬೇಕಿದೆ ಎಂದು ಸ್ಪಷ್ಟನೆ ನೀಡಿದರು.
ದರ ಏರಿಕೆಯನ್ನು ಮನಸ್ಸಿಗೆ ಬಂದ ಹಾಗೆ ಸುಮ್ಮನೆ ಹೆಚ್ಚಿಸಿಲ್ಲ. ಯಾವ ಕಾರಣಕ್ಕೆ ಹೆಚ್ಚಳ ಆಗಿದೆ ಎಂಬುದನ್ನು ಬಿಜೆಪಿಯವರು ಅರ್ಥ ಮಾಡಿಕೊಳ್ಳಬೇಕು. ಈ ಸಂದರ್ಭಕ್ಕೆ ಸಂಪನೂಲ ಕ್ರೂಢೀಕರಣ ಅಗತ್ಯವಿದೆ. ನಾವು ಈಗಲೂ ನೆರೆರಾಜ್ಯಗಳಿಗೆ ಸರಿಸಮನಾದ ದರ ಪರಿಷ್ಕರಣೆ ಮಾಡಲಾಗಿಲ್ಲ. ಬಿಜೆಪಿಯವರು ಹಳೆಯದನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.
ತೈಲಬೆಲೆ ಏರಿಕೆಯಿಂದ ಸಹಜವಾಗಿ ಅಗತ್ಯ ವಸ್ತುಗಳ ಬೆಲೆ ಹೆಚ್ಚಾಗುತ್ತಿದೆ. ಸಾರಿಗೆ, ಆಟೋ, ಬಸ್ ಪ್ರಯಾಣ ದರ ಎಲ್ಲವೂ ಹೆಚ್ಚಾಗುತ್ತದೆ. ಹೆಚ್ಚಾಗಲೇಬೇಕು. ಈ ಹಿಂದೆಯೂ ಇದೇ ಆಗಿತ್ತು ಎಂದು ಡಾ.ಪರಮೇಶ್ವರ ತಿಳಿಸಿದರು.