

ನವದೆಹಲಿ: ಸಿಎಎ ಮತ್ತು ಎನ್ಆರ್ಸಿ ವಿರೋಧದ ಹೋರಾಟದಿಂದಾಗಿ ಯುದ್ಧ ಭೂಮಿಯಂತಾಗಿರುವ ದೆಹಲಿಗೆ ಸೇನೆಯನ್ನು ಕರೆಸಿ ಪರಿಸ್ಥಿತಿಯನ್ನು ನಿಯಂತ್ರಿಸಿ ಎಂದು ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಗೃಹ ಸಚಿವ ಅಮಿತ್ ಷಾರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಸತತ ಮೂರು ದಿನಗಳಿಂದ ದೆಹಲಿಯಲ್ಲಿ ಹೋರಾಟವು ಹಿಂಸಾತ್ಮಕ ಹಾದಿಯಲ್ಲಿ ಸಾಗುತ್ತಿದ್ದು ಒಬ್ಬ ಪೊಲೀಸ್ ಪೇದೆ ಸೇರಿದಂತೆ ಒಟ್ಟು 20 ಮಂದಿ ಸಾವನ್ನಪ್ಪಿದ್ದಾರೆ. 150ಕ್ಕೂ ಹೆಚ್ಚು ಜನರು ಗಾಯಾಳುಗಳಾಗಿದ್ದಾರೆ. ಹಾಗಾಗಿ ಗಲಭೆ ನಡೆಯುತ್ತಿರುವ ಪ್ರದೇಶಕ್ಕೆ ಸೇನೆಯನ್ನು ಕರೆತರಬೇಕು. ಆ ಮೂಲಕ ಜನರಲ್ಲಿ ಧೈರ್ಯ ತುಂಬಬೇಕು ಮತ್ತು ಇತರೆ ಪ್ರದೇಶಗಳಲ್ಲಿ ಕರ್ಫ್ಯೂ ಹಾಕಬೇಕು ಎಂದು ಕೇಜ್ರಿವಾಲ್ ಟ್ವೀಟ್ ಮೂಲಕ ಕೇಳಿಕೊಂಡಿದ್ದಾರೆ.
ಈ ಕುರಿತಾಗಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ ಪತ್ರವನ್ನು ಬರೆಯುವುದಾಗಿಯೂ ಸಹ ಅವರು ತಿಳಿಸಿದ್ದಾರೆ.
ರಾಜ್ಯದಲ್ಲಿ ಪರಿಸ್ಥಿತಿ ತೀರಾ ಗಂಭೀರವಾದಾಗ ರಾಜ್ಯ ಪೊಲೀಸ್ ಇಲಾಖೆಗೆ ಸೇನೆಯ ಸಹಾಯ ಅಗತ್ಯ ಎನಿಸಿದಾಗ ಮಾತ್ರ ಸೇನೆಯನ್ನು ಕರೆಸಿಕೊಳ್ಳಬಹುದಾಗಿದೆ. ದೆಹಲಿಯು ಕೇಂದ್ರಾಡಳಿತ ಪ್ರದೇಶವಾದ್ದರಿಂದ ಪೊಲೀಸ್ ಇಲಾಖೆಯು ಕೇಂದ್ರದ ನಿರ್ವಹಣೆಯಲ್ಲಿದ್ದು ಸೇನೆಯನ್ನು ಕರೆಸಿಕೊಳ್ಳುವುದು ಕೇಂದ್ರದ ಕೈನಲ್ಲಿರುತ್ತದೆ. (ಏಜೆನ್ಸೀಸ್)