ಎಕ್ಸಿಟ್​ ಪೋಲ್​ ಬೆನ್ನಲ್ಲೇ ಇವಿಎಂ ಮೇಲೆ ಆಪ್​ ಪಕ್ಷದ ಹದ್ದಿನ ಕಣ್ಣು: ಭದ್ರತೆ ಕುರಿತು ಅರವಿಂದ್​ ಕೇಜ್ರಿವಾಲ್​ ನೇತೃತ್ವದಲ್ಲಿ ಚರ್ಚೆ

Kejriwal
Published on

ನವದೆಹಲಿ: ದೆಹಲಿಯ ಮತದಾನೋತ್ತರ ಸಮೀಕ್ಷೆಗಳು ಆಮ್​ ಆದ್ಮಿ ಪಕ್ಷ ಆರಾಮವಾಗಿ ವಿಜಯ ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಇದರ ಬೆನ್ನಲ್ಲೇ ಸಿಎಂ ಅರವಿಂದ್​ ಕೇಜ್ರಿವಾಲ್​ ಪಕ್ಷದ ಹಿರಿಯ ನಾಯಕರಿಗೆ ಹಾಗೂ ಚುಣಾವಣಾ ಚಾಣಕ್ಯ ಪ್ರಶಾಂತ್​ ಕಿಶೋರ್​ಗೆ ಕರೆ ನೀಡಿ ಮತಯಂತ್ರ(ಇವಿಎಂ) ಭದ್ರತೆ ಕುರಿತು ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶನಿವಾರ ದೆಹಲಿಯ 70 ಕ್ಷೇತ್ರಗಳ ಮತದಾನ ಮುಕ್ತಾಯವಾಗಿದ್ದು, ಫೆ. 11ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಮತದಾನದ ಬೆನ್ನಲ್ಲೇ ಎಕ್ಸಿಟ್​ ಪೋಲ್​ನಲ್ಲಿ ಆಪ್​ಗೆ ಸ್ಪಷ್ಟ ಬಹುಮತ ದೊರೆಯಲಿದೆ ಎಂದು ಭವಿಷ್ಯ ನುಡಿದಿವೆ.

ಹೀಗಾಗಿ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ, ಸಂಜಯ್​ ಸಿಂಗ್​, ರಾಘವ ಚಡ್ಡಾ ಮತ್ತು ಗೋಪಾಲ್​ ರೈ ಸೇರಿದಂತೆ ಅನೇಕ ಆಪ್​ ನಾಯಕರ ಉಪಸ್ಥಿತಿಯಲ್ಲಿ ಅರವಿಂದ್​ ಕೇಜ್ರಿವಾಲ್​ ಸಭೆ ನಡೆಸಿದ್ದಾರೆ. ಇದೇ ವೇಳೆ ಪಕ್ಷದ ಚುನಾವಣಾ ತಂತ್ರಗಾರ ಪ್ರಶಾಂತ್​ ಕಿಶೋರ್​ ಕೂಡ ಉಪಸ್ಥಿತರಿದ್ದರು.

ಅನೇಕ ಎಕ್ಸಿಟ್​ ಪೋಲ್​ಗಳು ಒಟ್ಟು 70 ಸ್ಥಾನಗಳಲ್ಲಿ ಆಪ್​ಗೆ 56, ಬಿಜೆಪಿ 14 ಮತ್ತು ಕಾಂಗ್ರೆಸ್​ಗೆ 1 ಸ್ಥಾನ ಎಂದು ಹೇಳಿವೆ. ಬಹುಮತ ಸಾಬೀತಿಗೆ 36 ಸ್ಥಾನ ಬೇಕಾಗಿರುವುದರಿಂದ ಸಮೀಕ್ಷೆ ಪ್ರಕಾರ ಆಪ್​ ಜಯಭೇರಿ ಬಾರಿಸಲಿದೆ. ಆದರೆ, ಎಕ್ಸಿಟ್​ ಫೋಲ್​​ ತಳ್ಳಿ ಹಾಕಿರುವ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್​ ತಿವಾರಿ ಪಕ್ಷ ಬಹುಮತ ಸಾಧಿಸಲಿದೆ ಎಂದಿದ್ದಾರೆ.

ಎಲ್ಲ ಎಕ್ಸಿಟ್​ ಪೋಲ್​ ವಿಫಲವಾಗಲಿದೆ. ಈ ಟ್ವೀಟ್​ ಅನ್ನು ಸೇವ್​ ಮಾಡಿಕೊಳ್ಳಿ. ಬಿಜೆಪಿ 48 ಸ್ಥಾನಗಳೊಂದಿಗೆ ಬಿಜೆಪಿ ಸರ್ಕಾರ ರಚಿಸಲಿದೆ. ಇವಿಎಂ ಮೇಲೆ ದೂಷಿಸಲು ಮುಂದಾಗಬೇಡಿ ಎಂದು ಟ್ವೀಟ್​ ಮಾಡಿದ್ದಾರೆ.

ಅಲ್ಲದೆ, ಎಕ್ಸಿಟ್​ ಪೋಲ್​ ಬೆನ್ನಲ್ಲೇ ಗೃಹ ಸಚಿವ ಅಮಿತ್​ ಷಾ ಕೂಡ ಸಭೆ ಕರೆದು ಚರ್ಚಿಸಿದ್ದಾರೆ. ಹೀಗಾಗಿ ಆಪ್​ ಇವಿಎಂ ಮೇಲೆ ಈಗಿನಿಂದಲೇ ಹದ್ದಿನ ಕಣ್ಣಿಡಲು ತಯಾರಿ ನಡೆಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net